ತುಮಕೂರು:ಕಾಂಗ್ರೆಸ್ನಲ್ಲಿ ಸಂಪುಟ ರಚನೆ ಕಸರತ್ತು ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಗೆದ್ದಿರುವ ಏಳು ಮಂದಿ ಕಾಂಗ್ರೆಸ್ ಶಾಸಕರು ಸಚಿವ ಸಂಪುಟ ಸೇರಲು ಭಾರಿ ಕಸರತ್ತು ಆರಂಭಿಸಿದ್ದಾರೆ. ತುಮಕೂರು ಜಿಲ್ಲೆಯಿಂದಲೂ ಮಂತ್ರಿಗಿರಿ ರೇಸ್ನಲ್ಲಿ 5 ಕ್ಕೂ ಹೆಚ್ಚು ಶಾಸಕರು ಇದ್ದಾರೆ. 11 ರಲ್ಲಿ 7 ಕ್ಷೇತ್ರಗಳನ್ನು ಗೆದ್ದುಕೊಂಡಿರುವ ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್, ಮಾಜಿ ಸಚಿವರಾದ ಟಿ.ಬಿ. ಜಯಚಂದ್ರ, ಎಸ್.ಆರ್. ಶ್ರೀನಿವಾಸ್, ಶಾಸಕ ಕೆ.ಎನ್. ರಾಜಣ್ಣ, ಷಡಕ್ಷರಿ ನಡುವೆ ಮಂತ್ರಿಗಿರಿಗಾಗಿ ಪೈಪೋಟಿ ನಡೆಯುತ್ತಿದೆ.
ಮುಖ್ಯಮಂತ್ರಿ ರೇಸ್ನಲ್ಲಿದ್ದ ಕೊರಟಗೆರೆ ಶಾಸಕ ಪರಮೇಶ್ವರ್:ದಲಿತ ಸಿಎಂ ಎನ್ನುವ ಹೆಸರಿನಲ್ಲಿ ಸಿಎಂ ಗಾದಿ ಮೇಲೆ ಕಣ್ಣಿಟ್ಟಿದ್ದ ಕೊರಟಗೆರೆ ವಿಧಾನಸಭಾ ಶಾಸಕ ಜಿ.ಪರಮೇಶ್ವರ್ ಅವರು ಕೊನೆಗೆ ಡಿಸಿಎಂ ಸ್ಥಾನವೂ ಸಿಗದಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಈಗ ಪ್ರಬಲ ಖಾತೆಯ ಮೇಲೆ ಕಣ್ಣಿಟ್ಟಿರುವ ಮಾಜಿ ಡಿಸಿಎಂ, ಮಾಜಿ ಸಚಿವ, ಶಿರಾ ಶಾಸಕ ಟಿ.ಬಿ. ಜಯಚಂದ್ರ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಕೊನೆಯ ಚುನಾವಣೆ ಎನ್ನುವ ನೆಪವೊಡ್ಡಿ ಮಂತ್ರಿಗಿರಿಗೆ ಲಾಬಿ ನಡೆಸಿದ್ದು, ಒಕ್ಕಲಿಗ ಕೋಟಾದಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಜಯಚಂದ್ರ ಪ್ಲಾನ್ ರೂಪಿಸಿದ್ದಾರೆ.
ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅವರೂ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದು, ಅದಲ್ಲದೆ ಇವರು ನಿಯೋಜಿತ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದಾರೆ. ನಾಯಕ ಕೋಟಾದ ಅಡಿ ಸಚಿವ ಸ್ಥಾನ ಪಡೆಯಲು ರಾಜಣ್ಣ ಕಸರತ್ತು ನಡೆಸುತ್ತಿದ್ದು, ಮಂತ್ರಿ ಸ್ಥಾನ ಬೇಕೇ ಬೇಕು ಎಂದು ಬಹಿರಂಗವಾಗಿಯೇ ಹೇಳಿಕೆ ಕೊಡುತ್ತಿದ್ದಾರೆ. ಅದರಲ್ಲಿಯೂ ಸಹಕಾರಿ ಇಲಾಖೆಯೇ ಬೇಕು ಎಂದು ಕೆ ಎನ್ ರಾಜಣ್ಣ ಪಟ್ಟು ಹಿಡಿದಿದ್ದಾರೆ.