ತುಮಕೂರು: ಚಿರತೆ ದಾಳಿಗೆ ಸಿಲುಕಿದ ಮಗಳನ್ನು ತಂದೆ ರಕ್ಷಿಸಿರುವ ಘಟನೆ ತುಮಕೂರು ತಾಲೂಕಿನ ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಲೇಖನ (7) ಚಿರತೆ ದಾಳಿಯಿಂದ ಪಾರಾದ ಬಾಲಕಿ. ಬಾಲಕಿ ಮೇಲೆ ದಾಳಿ ನಡೆಸಿ ಹೊತ್ತೊಯ್ಯಲು ಯತ್ನಿಸುತ್ತಿದ್ದಂತೆ, ತಂದೆ ರಾಕೇಶ್ ಬೆದರಿಸಿ ಓಡಿಸಿದ್ದಾರೆ.
ಸಂಜೆಯ ವೇಳೆ ರಾಕೇಶ್ ಮತ್ತು ಹರ್ಷಿತಾ ದಂಪತಿಯ ಮಗಳು ಲೇಖನ ಮನೆ ಮುಂದೆ ಆಟವಾಡುತ್ತಿದ್ದಳು. ಈ ವೇಳೆ ಚಿರತೆ ದಿಢೀರ್ ಮೈಮೇಲೆರಗಿದೆ. ಸ್ಥಳದಲ್ಲೇ ಇದ್ದ ರಾಕೇಶ್ ಜೋರಾಗಿ ಕೂಗಿದ್ದು, ದೊಣ್ಣೆಯಿಂದ ಬೆದರಿಸಿದ್ದಾರೆ. ಆಗ ಚಿರತೆ ಮಗುವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದೆ.
ಬಾಲಕಿಯ ಕಾಲಿಗೆ ಪರಚಿದ ಗಾಯಗಳಾಗಿದ್ದು ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜ್ಯದ ವಿವಿಧೆಡೆ ಚಿರತೆ ದಾಳಿ ಪ್ರಕರಣಗಳು:ರಾಜ್ಯದ ವಿವಿಧೆಡೆ ಚಿರತೆ ದಾಳಿ ಪ್ರಕರಣಗಳು ವರದಿಯಾಗುತ್ತಲೇ ಇದೆ. ಇದರೊಂದಿಗೆ ಜನವಸತಿ ಪ್ರದೇಶಗಳಲ್ಲಿ ಚಿರತೆ, ಹುಲಿ ಕಾಣಿಸಿಕೊಂಡು ಭೀತಿ ಸೃಷ್ಟಿಸಿರುವ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿತ್ತು. ಬೆಂಗಳೂರು ಹೊರವಲಯದ ಕೆಲವೆಡೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ ಚಿರತೆ, ಅರಣ್ಯ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಗುಂಡೇಟಿಗೆ ಬಲಿಯಾಗಿತ್ತು. ಚಿರತೆಯನ್ನು ಬೊಮ್ಮನಹಳ್ಳಿಯ ಕುಡ್ಲುಗೇಟ್ ಬಳಿ ಸೆರೆ ಹಿಡಿಯಲಾಗಿತ್ತು. ಆದರೆ ಕಾರ್ಯಾಚರಣೆ ವೇಳೆ ಗುಂಡು ತಗುಲಿದ್ದರಿಂದ ಮೃತಪಟ್ಟಿತ್ತು.
ಸೆರೆ ಕಾರ್ಯಾಚರಣೆಯಲ್ಲಿ ಚಿರತೆಯು ಅರಣ್ಯ ಇಲಾಖೆ ಸಿಬ್ಬಂದಿ, ಪಶು ವೈದ್ಯರು ಸೇರಿದಂತೆ ಮೂವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಈ ಸಂದರ್ಭದಲ್ಲಿ ಸಿಬ್ಬಂದಿಯೊಬ್ಬರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರಿಂದ ಚಿರತೆಯ ಕತ್ತಿನ ಭಾಗಕ್ಕೆ ಗಾಯವಾಗಿತ್ತು. ಬಳಿಕ ಆರೈಕೆ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿತ್ತು.
ಹುಬ್ಬಳ್ಳಿ-ಎತ್ತು ತಿಂದು ಹಾಕಿದ ಚಿರತೆ:ಕಲಘಟಗಿ ತಾಲೂಕಿನ ಹಟಕಿನಾಳ ಗ್ರಾಮದಲ್ಲಿ ಚಿರತೆ ದಾಳಿಗೆ ಎತ್ತೊಂದು ಸಾವನ್ನಪ್ಪಿತ್ತು. ಗ್ರಾಮದ ಮಲ್ಲಯ್ಯ ಶರಣಯ್ಯ ಗೋಡಿಮನಿ ಎಂಬವರಿಗೆ ಸೇರಿದ ಎತ್ತನ್ನು ಚಿರತೆ ತಿಂದು ಹಾಕಿತ್ತು. ಮಲ್ಲಯ್ಯ ರಾತ್ರಿ ಹೊಲದ ಮನೆಯಲ್ಲಿ ಎರಡು ಎತ್ತುಗಳನ್ನು ಕಟ್ಟಿ ಹಾಕಿದ್ದರು. ಇದರಲ್ಲಿ ಒಂದು ಕಾಣೆಯಾಗಿತ್ತು. ಇನ್ನೊಂದು ಎತ್ತನ್ನು ಹುಡಿಕಿಕೊಂಡು ಇಲ್ಲಿನ ಕಬ್ಬಿನ ಗದ್ದೆಯಲ್ಲಿ ಹೋಗಿದ್ದಾರೆ. ಈ ವೇಳೆ ಒಂದು ತಾಯಿ ಚಿರತೆ ಹಾಗೂ ಎರಡು ಚಿರತೆ ಮರಿಗಳು ಸೇರಿ ಎತ್ತನ್ನು ಕಬ್ಬಿನ ಗದ್ದೆಗೆ ಎಳೆದುಕೊಂಡು ಹೋಗುವುದನ್ನು ಕಂಡಿದ್ದಾರೆ. ಬಳಿಕ ಅಲ್ಲಿಂದ ಓಡಿ ಬಂದು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ:ಬೆಂಗಳೂರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ದಾಳಿ: ಬಲೆಗೆ ಕೆಡವಲು ಮುಂದುವರಿದ ಕಾರ್ಯಾಚರಣೆ