ತುಮಕೂರು:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರಾಜಧಾನಿಯಲ್ಲಿನ ಗಾಂಧಿನಗರದ ಬಳಿಯಿರುವ ಶ್ರೀ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಿ. ವೆಂಕಟೇಶ್ ಮೂರ್ತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 19 ರಂದು ಬೆಳಗ್ಗೆ 11ಗಂಟೆಗೆ ಬೆಂಗಳೂರಿನ ಮೌರ್ಯ ಹೋಟೆಲ್ ಎದುರಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಕುರುಬ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡ ಮೀಸಲಾತಿಗೆ ಸೇರ್ಪಡೆ ಮಾಡಲು ಕುಲಶಾಸ್ತ್ರ ಅಧ್ಯಯನವನ್ನು ಸರ್ಕಾರ ಕೂಡಲೇ ತರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು, ಕರ್ನಾಟಕ ರಾಜ್ಯದಲ್ಲಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗಳು ಜಾತಿ ಸಿಂಧುತ್ವ ಪ್ರಮಾಣ ಪತ್ರವನ್ನು ನೀಡುವ ಮೊದಲು ರಾಜ್ಯ ಸರ್ಕಾರದ ಸಂಸ್ಥೆಯಾದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ವರದಿ ಪಡೆದು, ಜಾತಿ ಸಿಂಧುತ್ವ ಪ್ರಮಾಣ ಪತ್ರವನ್ನು ನೀಡಬೇಕು ಎಂಬ ಸರ್ಕಾರದ ಆದೇಶವನ್ನು ಹಿಂಪಡೆದು ಈ ಹಿಂದೆ ಇದ್ದ ಆದೇಶವನ್ನು ಮುಂದುವರೆಸಬೇಕು ಎಂದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಹೆಚ್. ಕಾಂತರಾಜು ಅವರು ನೀಡಿರುವ ಜಾತಿ ಜನಗಣತಿ ಸಮೀಕ್ಷೆಯ ವರದಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು, 2ಎ ಮೀಸಲಾತಿ ಪಟ್ಟಿಗೆ ಯಾವುದೇ ಮುಂದುವರೆದ ಜಾತಿಗಳನ್ನು ಸೇರಿಸಬಾರದು, ಕುರುಬ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ 500 ಕೋಟಿ ರೂಗಳ ಅನುದಾನವನ್ನು ಕಾಯ್ದಿರಿಸಬೇಕು ಎಂಬ ಅಂಶಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.