ತುಮಕೂರು:ಕುಣಿಗಲ್ ತಾಲೂಕಿಗೆ ಪ್ರತ್ಯೇಕ ನಾಲೆ (ಎಕ್ಸ್ಪ್ರೆಸ್ ಕೆನಾಲ್) ನಿರ್ಮಾಣದ ಅಗತ್ಯವಿಲ್ಲ. ಜಿಲ್ಲೆಯ ಬಹುತೇಕ ಶಾಸಕರು ಈ ಯೋಜನೆಯನ್ನು ವಿರೋಧಿಸಿದ್ದು, ಸಚಿವ ಸಂಪುಟ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆಯಾಗಿದೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಮಾತನಾಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಾಸನ ಜಿಲ್ಲೆಯ ಗೊರೂರು ಹೇಮಾವತಿ ಜಲಾಶಯದಿಂದ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳಿಗೆ ಹಾಗೂ ಕೆರೆಕಟ್ಟೆಗಳಿಗೆ ಸಮರ್ಪಕವಾಗಿ ನೀರು ಹರಿಸಲಾಗುತ್ತಿರುವ ಬಗ್ಗೆ ನಡೆದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತ್ಯೇಕ ನಾಲೆಯ ಬದಲಾಗಿ ಈಗಿರುವ ನಾಲೆಯ ಆಧುನೀಕರಣಕ್ಕಾಗಿ 1005 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ಆಧುನೀಕರಣಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಹೇಮಾವತಿ ನೀರನ್ನು ಈಗಾಗಲೇ ತುಮಕೂರು ನಾಲೆಗೆ ಆಗಸ್ಟ್ 9ರಿಂದ ಹರಿಸಲಾಗುತ್ತಿದ್ದು, ನಗರ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು. ಜಿಲ್ಲೆಯ ರೈತರಿಗೆ ಹಾಗೂ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಜಲಾಶಯದಿಂದ ಆಗಸ್ಟ್ 30ರವರೆಗೂ ನೀರು ಹರಿಸಲಾಗುವುದು. ನಂತರ ತಾಲೂಕುವಾರು ನೀರು ಹಂಚಿಕೆ ಮಾಡುವುದರ ಬಗ್ಗೆ ಶಾಸಕರ ಸಭೆ ನಡೆಸಿ ನೀರು ಹರಿಸುವುದರ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
ಕುಣಿಗಲ್ ಶಾಸಕ ಡಾ. ರಂಗನಾಥ್ ಮಾತನಾಡಿ, ಕುಣಿಗಲ್ ಕ್ಷೇತ್ರಕ್ಕೆ ಪ್ರತ್ಯೇಕ ನಾಲೆಯ ಅವಶ್ಯಕವಿದ್ದು, ಹೊಸ ನಾಲೆಯ ನಿರ್ಮಾಣದ ಕುರಿತು ತಮಗೂ ಹಾಗೂ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಗುವುದು ಎಂದರು. ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಮಾತನಾಡಿ, ತುಮಕೂರು ನಗರಕ್ಕೆ 2 ಟಿಎಂಸಿ ನೀರು ಅವಶ್ಯಕವಿದೆ. ಅಲ್ಲದೇ ಮೈದಾಳ ಕೆರೆಯಿಂದ ಸಿದ್ದಗಂಗಾ ಮಠಕ್ಕೆ ಪೈಪ್ಲೈನ್ ಮೂಲಕ ನೀರು ಹರಿಸಬೇಕು ಎಂದು ಸಚಿವರ ಗಮನಕ್ಕೆ ತಂದರು.
ಸಭೆಯಲ್ಲಿ ಸಂಸದರಾದ ಜಿ.ಎಸ್.ಬಸವರಾಜು ಹಾಗೂ ನಾರಾಯಣಸ್ವಾಮಿ, ಶಾಸಕರಾದ ಎಸ್.ಆರ್.ಶ್ರೀನಿವಾಸ್, ಮಸಾಲೆ ಜಯರಾಮ್, ಬೆಮೆಲ್ ಕಾಂತರಾಜು, ತಿಪ್ಪೇಸ್ವಾಮಿ, ವೀರಭದ್ರಯ್ಯ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಸೇರಿದಂತೆ ಹೇಮಾವತಿ ನಾಲಾ ಎಂಜಿನಿಯರ್ಗಳು, ನೀರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.