ತುಮಕೂರು:ಕೆರೆ ನೀರಿನಲ್ಲಿ ಮುಳುಗುತ್ತಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಇಬ್ಬರು ಸಹೋದರಿಯರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(ಕೆಎಸ್‌ಆರ್‌ಟಿಸಿ) ಬಸ್ ಚಾಲಕರೊಬ್ಬರು ರಕ್ಷಿಸಿದ್ದಾರೆ. ಇಂಥದ್ದೊಂದು ಮಾನವೀಯ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಹಂದಿಕುಂಟೆ ಎಂಬಲ್ಲಿ ನಡೆದಿದೆ. ನಿಗಮದ ಶಿರಾ ಘಟಕದ ಬಸ್ ಚಾಲಕ ಮಂಜುನಾಥ ಅವರು ಹೆಣ್ಣು ಮಕ್ಕಳ ಜೀವ ಕಾಪಾಡಿರುವ ವ್ಯಕ್ತಿ.
ಆಗಿದ್ದೇನು?: ಮಂಜುನಾಥ್ ಅವರು ನಾಗೇನಹಳ್ಳಿ ಕಡೆಯಿಂದ ಶಿರಾ ಮಾರ್ಗವಾಗಿ ಬಸ್ ಚಲಾಯಿಸಿಕೊಂಡು ಬರುತ್ತಿದ್ದರು. ಈ ಸಂದರ್ಭದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಸಹೋದರಿಯರನ್ನು ಗಮನಿಸಿದ್ದಾರೆ. ಕೂಡಲೇ ಬಸ್ ನಿಲ್ಲಿಸಿ ಕೆರೆಗೆ ಜಿಗಿದು ಇಬ್ಬರನ್ನೂ ನೀರಿನಿಂದ ಹೊರ ತಂದಿದ್ದಾರೆ. ಹಂದಿಕುಂಟೆ ಅಗ್ರಹಾರ ಕೆರೆಯಲ್ಲಿ ಈ ಹೆಣ್ಣು ಮಕ್ಕಳು ಬಟ್ಟೆ ತೊಳೆಯಲು ಹೋಗಿದ್ದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದರು ಎಂದು ತಿಳಿದುಬಂದಿದೆ.
ಬರಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಹೋದರಿಯರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಅಕ್ಕ-ತಂಗಿಯರು ಬದುಕುಳಿದಿದ್ದಾರೆ. ಮಂಜುನಾಥ್ ಮಾನವೀಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಹಿರಿಯ ಅಧಿಕಾರಿಗಳು ಸನ್ಮಾನಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮಂಜುನಾಥ್ ಇದನ್ನೂ ಓದಿ:ಜೀವ ಒತ್ತೆ ಇಟ್ಟು ಪ್ರಾಣ ರಕ್ಷಣೆ: ಪ್ರವಾಸಿಗರಿಗೆ ಆಪತ್ಭಾಂದವರು ಈ ಲೈಫ್ ಗಾರ್ಡ್ಸ್
ಕೆಎಸ್‌ಆರ್‌ಟಿಸಿ MD ಮೆಚ್ಚುಗೆ: "ಮಂಜುನಾಥ ಎಂ. ಎಂಬ ಶಿರಾ ಘಟಕದ ಕೆಎಸ್‌ಆರ್‌ಟಿಸಿ ಚಾಲಕ ನಾಗಪ್ಪನಹಳ್ಳಿ ಗೇಟ್ ಮಾರ್ಗದಲ್ಲಿ ಬಸ್ ಓಡಿಸುತ್ತಿದ್ದಾಗ ಹಂದಿಕುಂಟೆ ಅಗ್ರಹಾರ ಕೆರೆಯಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಿಸಿದ ಮಾಹಿತಿ ದೊರೆತಿದೆ. ನಿನ್ನೆ ಮಧ್ಯಾಹ್ನ 2:15 ರ ಸುಮಾರಿಗೆ ಮಕ್ಕಳು ಮುಳುಗುತ್ತಿರುವುದನ್ನು ಗಮನಿಸಿದ ಅವರು, ವಾಹನ ನಿಲ್ಲಿಸಿ ಕೆರೆಗೆ ಧುಮುಕಿದ್ದಾರೆ. ಬಳಿಕ ಇಬ್ಬರನ್ನೂ ದಡ ಸೇರಿಸಿ ಪ್ರಾಣ ಕಾಪಾಡಿದ್ದಾರೆ" ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.
ಮುಳುಗುತ್ತಿದ್ದ ಹೆಣ್ಣು ಮಕ್ಕಳನ್ನು ಕೆರೆಗೆ ಧುಮುಕಿ ರಕ್ಷಿಸಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಇದನ್ನೂ ಓದಿ:ಬಂಡೆಕಲ್ಲಿಗೆ ತಾಗಿ ಮುಳುಗುತ್ತಿದ್ದ ಬೋಟ್: 17 ಮಂದಿ ಮೀನುಗಾರರ ರಕ್ಷಣೆ!
"ಚಾಲಕನ ಸಮಯ ಪ್ರಜ್ಞೆಯಿಂದ ಮನತುಂಬಿ ಬಂದಿದೆ. ಮಾನವೀಯ, ಸಮಯೋಚಿತ ಕಾರ್ಯದಿಂದ ಅತ್ಯಮೂಲ್ಯ ಜೀವಗಳು ಉಳಿದಿವೆ. ಇವರು ಎಲ್ಲಾ ಸಿಬ್ಬಂದಿಗೆ ಮಾದರಿ. ನಮ್ಮ ಚಾಲನಾ ಸಿಬ್ಬಂದಿಯ ಕಾರ್ಯತತ್ಪರತೆ ಸಂಸ್ಥೆಯ ಹೆಮ್ಮೆ ಮತ್ತು ಗೌರವವಾಗಿದೆ. ಇಂತಹ ಸಿಬ್ಬಂದಿಯೇ ನಮ್ಮ ಆಸ್ತಿ" ಎಂದು ಸಂತಸ ವ್ಯಕ್ತಪಡಿಸಿದರು. ಪ್ರಾಣಾಪಾಯದಿಂದ ಪಾರಾದ ಸಹೋದರಿಯರು ಹಂದಿಕುಂಟೆ ಗ್ರಾಮದ ನಿವಾಸಿಗಳಾಗಿದ್ದಾರೆ. ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಧ್ವಜ ರಕ್ಷಣೆಗೆ ಪ್ರಾಣವನ್ನೇ ಪಣಕ್ಕಿಟ್ಟ ಅಗ್ನಿಶಾಮಕ ಸಿಬ್ಬಂದಿ: ದೇಶಪ್ರೇಮಕ್ಕೆ ತಲೆ ಬಾಗಿದ ಜನ