ತುಮಕೂರು:ರಾಷ್ಟ್ರದ ನಾಯಕರ ಬಳಿ ಅನೇಕ ವಿಚಾರಗಳನ್ನು ಚರ್ಚೆ ಮಾಡಿದ್ದೀವಿ. ಕಳೆದ ಮೂರೂವರೆ ವರ್ಷದಿಂದ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಜನರ ಗಮನ ಸೆಳೆದಿದ್ದೇವೆ. ಇಡೀ ರಾಜ್ಯಕ್ಕೆ ಅಗೌರವ ತರುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.
ಕೊರಟಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಭ್ರಷ್ಟಾಚಾರಕ್ಕೆ ಆಧಾರ ಕೊಡಿ ಎಂದು ಕೇಳಿದ್ರು. ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷರು ನೇರವಾಗಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಮೋದಿ ನಾನು ತಿನ್ನೋದಿಲ್ಲ, ತಿನ್ನೋರಿಗೂ ಬಿಡಲ್ಲ ಎಂದು ಹೇಳ್ತಾರೆ. ಸದ್ಯಕ್ಕೆ ನಡೆದಿರುವ ಲೋಕಾಯುಕ್ತ ದಾಳಿ ಬಗ್ಗೆ ಮಾತನಾಡುತ್ತಿಲ್ಲ. ಇದೀಗ ಎಲ್ಲ ಕಚೇರಿಗಳಲ್ಲಿ ಆಗುತ್ತಿರುವ ಭ್ರಷ್ಟಾಚಾರದ ಬಗ್ಗೆ ಜನರ ಗಮನ ಸೆಳೆದಿದ್ದೇವೆ ಎಂದು ಡಿಕೆಶಿ ಹೇಳಿದರು.
ಭ್ರಷ್ಟಾಚಾರದಿಂದ ಸಾವಿರಾರು ಜನ ನೊಂದಿದ್ದಾರೆ. ಸಿಎಂ ಕೇಳಿದ ಸಾಕ್ಷಿಗೆ ಲೋಕಾಯುಕ್ತ ಅಧಿಕಾರಿಗಳು ಸಾಕ್ಷಿ ಕೊಟ್ಟಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಾರೆ ಎಂದರು. ಎಲ್ಲಾ ಲೋಕಾಯುಕ್ತ ಅಧಿಕಾರಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ರಾಜೀನಾಮೆಗೂ ನಾವು ಒತ್ತಾಯ ಮಾಡಿದ್ದೇವೆ ಎಂದು ಹೇಳಿದರು.
9ನೇ ತಾರೀಖಿನ ಬೆಳಗ್ಗೆ 9 ಗಂಟೆಗೆ ರಾಜ್ಯಾದ್ಯಂತ ಭ್ರಷ್ಟಾಚಾರದ ಪಾರ್ಟಿ ವಿರುದ್ಧ ಬಂದ್ ಆಚರಣೆ ಮಾಡಲಾಗುವುದು. ಬಂದ್ನಿಂದಾಗಿ ಯಾವುದೇ ಶಾಲೆ, ಆಸ್ಪತ್ರೆಗೆ ತೊಂದರೆ ಆಗದಂತೆ ಪ್ರತಿಭಟನೆ ನಡೆಸಲಾಗುವುದು. ಎಲ್ಲಾ ವ್ಯಾಪಾರಿಗಳು ಬೆ. 9 ಗಂಟೆಯಿಂದ 11 ಗಂಟೆವರೆಗೆ ಸಹಕಾರ ನೀಡಬೇಕು. ಕಾನೂನು ಕೈಗೆತ್ತಿಕೊಳ್ಳುವ ಕೆಲಸವನ್ನು ಯಾರೂ ಕೂಡ ಮಾಡಬಾರದು ಎಂದು ಮನವಿ ಮಾಡಿದರು.