ತುಮಕೂರು: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆ ನಂದಿನಿ ಹಾಲಿನ ಮಾರಾಟ ಗಣನೀಯವಾಗಿ ಕುಸಿತ ಕಂಡಿದ್ದು ಕೆಎಂಎಫ್ಗೆ ನಷ್ಟ ಉಂಟಾಗಿದೆ. ಮೈಸೂರು ಹಾಗೂ ತುಮಕೂರು ಹಾಲಿನ ಡೈರಿಗಳಿಗೆ ಭೇಟಿ ನೀಡಿದಾಗ ಈ ಸಮಸ್ಯೆ ತಲೆದೋರಿರುವುದು ಗಮನಕ್ಕೆ ಬಂದಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ತುಮಕೂರು ಹಾಲು ಒಕ್ಕೂಟಕ್ಕೆ ಭೇಟಿ ನೀಡಿದ ಸಚಿವರು, ಹಾಲು ಸಂಸ್ಕರಣಾ ಘಟಕದ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ಡೈರಿಯಲ್ಲಿ ತುಪ್ಪ ಹಾಗೂ ಹಾಲಿನ ಪುಡಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಿದ್ದು, ಮಾರಾಟವಾಗಿಲ್ಲ. ಈ ಕುರಿತು ಕೆಎಂಎಫ್ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ತುಮಕೂರು ಹಾಲು ಒಕ್ಕೂಟಕ್ಕೆ ಭೇಟಿ ನೀಡಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೊರದೇಶಗಳಿಂದ ಕೇಂದ್ರ ಸರ್ಕಾರ ಹಾಲು ಉತ್ಪನ್ನಗಳನ್ನು ತರಿಸಿಕೊಳ್ಳುವುದರಿಂದ ದೇಶೀಯ ಹಾಲು ಉತ್ಪಾದಕರಿಗೆ ತೊಂದರೆಯಾಗಲಿದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. ತುಮಕೂರು ಹಾಲು ಒಕ್ಕೂಟದಲ್ಲಿ 154 ಕೋಟಿ ರೂ.ಗಳ ಮೆಗಾ ಡೈರಿ ನಿರ್ಮಾಣಕ್ಕೆ ಮನವಿ ಮಾಡಿದ್ದು, ಕೋವಿಡ್-19 ನಿಯಂತ್ರಣಕ್ಕೆ ಬಂದ ನಂತರ ಅನುದಾನ ಮಂಜೂರು ಮಾಡಲು ಹಾಗೂ ಮೆಗಾ ಡೈರಿ ನಿರ್ಮಾಣ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಹಾಲು ಉತ್ಪಾದನಾ ಒಕ್ಕೂಟಗಳು ಈಗಾಗಲೇ ಕೋವಿಡ್-19 ನಿಂದ ಸಂಕಷ್ಟ ಅನುಭವಿಸುತ್ತಿವೆ. ಕೇಂದ್ರ ಸರ್ಕಾರವು ಹಾಲಿನ ಉತ್ಪನ್ನಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳಲು ಚಿಂತಿಸಿರುವುದು ಮತ್ತಷ್ಟು ಕಷ್ಟದ ಪರಿಸ್ಥಿತಿಗೆ ಒಕ್ಕೂಟಗಳನ್ನು ದೂಡಿದಂತಾಗುತ್ತದೆ ಎಂದರು.
ತುಮಕೂರು ಹಾಲು ಒಕ್ಕೂಟಕ್ಕೆ ಭೇಟಿ ನೀಡಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಮುಂಬೈ ಮತ್ತಿತರ ನಗರಗಳಿಗೆ ಸರಬರಾಜಾಗುತ್ತಿದ್ದ ತುಮಕೂರು ಒಕ್ಕೂಟದ ಹಾಲು ಶೇ. 75ರಷ್ಟು ಕಡಿಮೆಯಾಗಿದೆ. ಕೋವಿಡ್-19 ನಿಯಂತ್ರಣಕ್ಕೆ ಬಂದು ಬೇರೆ ರಾಜ್ಯಗಳಿಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳು ರಫ್ತಾದರೆ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.