ಸ್ಟಿಂಗ್ ಆಪರೇಷನ್ ನಡೆಸಿದ ಕೊರಟಗೆರೆ ತಹಶೀಲ್ದಾರ್ ತುಮಕೂರು:ಮಾರುವೇಷದಲ್ಲಿ ಬಂದ ಕೊರಟಗೆರೆಯ ತಹಶೀಲ್ದಾರ್ ನಾಹೀದಾ ಅವರು ಸ್ಟಿಂಗ್ ಆಪರೇಷನ್ ನಡೆಸಿ, ಆ್ಯಂಬುಲೆನ್ಸ್ ಸಿಬ್ಬಂದಿಯ ನಿರ್ಲಕ್ಷ್ಯ ಬಯಲು ಮಾಡಿದ್ದಾರೆ. ರಾಮಕ್ಕ ಎಂಬ ಹೆಸರಿನಿಂದ 108 ಸಿಬ್ಬಂದಿಗೆ ಕೊರಟಗೆರೆ ತಹಶೀಲ್ದಾರ್ ನಾಹೀದಾ ಕರೆ ಮಾಡಿದ್ದಾರೆ. ಕರೆ ಮಾಡಿದ 56 ನಿಮಿಷದ ನಂತರ ಸಾರ್ವಜನಿಕ ಆಸ್ಪತ್ರೆಗೆ ಆ್ಯಂಬುಲೆನ್ಸ್ ಬಂದಿದೆ. ತಹಶೀಲ್ದಾರ್ಗೆ 1ಗಂಟೆ ತಡ ಆಗುತ್ತದೆ, ಬರ್ತೀವಿ ಕಾಯ್ತೀರಾ ಎಂದು ಆ್ಯಂಬುಲೆನ್ಸ್ ಸಿಬ್ಬಂದಿ ಕೇಳಿದ್ದಾರೆ.
ಸ್ವತಃ ತಹಶೀಲ್ದಾರ್ರಿಂದ ಸಿಬ್ಬಂದಿಗೆ ಕರೆ: ಈ ಘಟನೆ ಚಿರತೆ ದಾಳಿಯಿಂದ ಗಾಯಗೊಂಡು ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತರು ಮತ್ತು ಮಕ್ಕಳ ಆರೋಗ್ಯ ವಿಚಾರಣೆಗೆ ಬಂದ ವೇಳೆ ನಡೆದಿದೆ. ಆಸ್ಪತ್ರೆಯಲ್ಲಿ ತುರ್ತುವಾಹನ ಸಮಸ್ಯೆ ಇರುವ ಬಗ್ಗೆ ರೋಗಿಗಳು ಹೇಳಿದ್ದಾರೆ. ರೋಗಿಗಳ ದೂರಿನ ಅನ್ವಯ ಸ್ವತಃ ತಹಶೀಲ್ದಾರ್ ರಾಮಕ್ಕ ಎಂಬ ಹೆಸರಿನಲ್ಲಿ 108ಕ್ಕೆ ತಮ್ಮ ಮೊಬೈಲ್‌ನಿಂದಲೇ ಕರೆ ಮಾಡಿದ್ದಾರೆ.
ತಹಶೀಲ್ದಾರ್ ನಾಹೀದಾ ಶನಿವಾರ ಸಂಜೆ 5ಗಂಟೆಗೆ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ರೋಗಿಗಳ ದೂರಿನ ಅನ್ವಯ ಸಂಜೆ 5ಗಂಟೆ 2ನಿಮಿಷಕ್ಕೆ 108ಕ್ಕೆ ರಾಮಕ್ಕನ ಹೆಸರಿನಲ್ಲಿ ವಡ್ಡಗೆರೆ ಕ್ರಾಸ್ ಬಳಿ ಅಪಘಾತ ಆಗಿದೆ ಎಂದು ಹೇಳಿ ಕರೆ ಮಾಡಿದ್ದರು. 2 ನಿಮಿಷ 108 ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿ ಮಾಹಿತಿ ಪಡೆದಿದ್ದಾರೆ. ನಂತರ ಕರೆಯು ಆ್ಯಂಬುಲೆನ್ಸ್ ಸಿಬ್ಬಂದಿಗೆ ವರ್ಗಾವಣೆ ಆಗಿದೆ.
ಕರೆಗೆ ಉಡಾಫೆ ಉತ್ತರ ನೀಡಿದ ಸಿಬ್ಬಂದಿ:ಆ್ಯಂಬುಲೆನ್ಸ್ ಸಿಬ್ಬಂದಿ ಉಮಾದೇವಿಯ ಜೊತೆ 8 ನಿಮಿಷ ತಹಶೀಲ್ದಾರ್ ಮಾತನಾಡುತ್ತಾರೆ. ಒಟ್ಟು 10 ನಿಮಿಷ ದೂರವಾಣಿ ಕರೆಯಲ್ಲಿಯೇ ಕಾಲಕಳೆದು 1ಗಂಟೆ ತಡವಾಗಿ ಬರ್ತಿವಿ ಕಾಯಿರಿ ಅಥವಾ ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ರವಾನಿಸಿ ಎಂಬ ಉಡಾಫೆಯ ಉತ್ತರವನ್ನು ಸಿಬ್ಬಂದಿ ನೀಡಿದ್ದಾರೆ.
ಇದನ್ನೂ ಓದಿ:ಗಾಯಾಳುಗಳನ್ನು ಕರೆದೊಯ್ಯಲು ಆಂಬ್ಯುಲೆನ್ಸ್ ವಿಳಂಬ.. ಆಸ್ಪತ್ರೆ ಸಿಬ್ಬಂದಿಗೆ ಶಾಸಕ ಜಿ ಪರಮೇಶ್ವರ್ ತರಾಟೆ
ತೋವಿನಕೆರೆಯಿಂದ ಕೊರಟಗೆರೆ ಪಟ್ಟಣಕ್ಕೆ ತುರ್ತುವಾಹನ 56 ನಿಮಿಷದ ನಂತರ ತಡವಾಗಿ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬರುತ್ತದೆ. ಸಂಜೆ 5 ಗಂಟೆ 2ನಿಮಿಷಕ್ಕೆ 108ಕ್ಕೆ ಕರೆ ಮಾಡಿದ್ರೆ, 5ಗಂಟೆ 58 ನಿಮಿಷಕ್ಕೆ ಸ್ಥಳಕ್ಕೆ ಬರುತ್ತದೆ. ಸ್ಟಿಂಗ್ ಆಪರೇಷನ್, ಮಾಕ್ ಡ್ರಿಲ್ ಪ್ರಯೋಗ ಮಾಡುವ ಮೂಲಕ ತಹಶೀಲ್ದಾರ್ ನಾಹೀದಾ 108 ಸೇವೆಯ ಅವ್ಯವಸ್ಥೆಯ ಬಗ್ಗೆ ಹೊರಗಡೆ ತರುವಂತಹ ಪ್ರಯತ್ನ ಮಾಡಿರುವುದು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ ಎಂದೇ ಹೇಳಬಹುದು.
ಅನಗತ್ಯ ಚರ್ಚೆ ಮಾಡ್ತಾರೆ 108 ಸಿಬ್ಬಂದಿ: ತುರ್ತುಸೇವೆಗಾಗಿ ಜನರು 108ಕ್ಕೆ ಕರೆ ಮಾಡಿದ್ರೆ ಸ್ವಿಚ್ಆಫ್ ಬರೋದು, ಬ್ಯುಸಿ ಬರೋದು ಸರ್ವೇ ಸಾಮಾನ್ಯ ಆಗಿದೆ. ಇನ್ನೂ ಕರೆ ಕನೆಕ್ಟ್ ಆದ್ರೂ, 108 ಗ್ರಾಹಕ ಸಿಬ್ಬಂದಿ 2 ನಿಮಿಷ ಮಾಹಿತಿ ಪಡಿತಾರೇ ನಂತರ 108 ಸಿಬ್ಬಂದಿಗೆ ದೂರವಾಣಿ ಕರೆ ವರ್ಗಾವಣೆ ಆಗುತ್ತದೆ. ಗ್ರಾಹಕ ಸೇವಾ ಸಿಬ್ಬಂದಿ ಮತ್ತು ಆ್ಯಂಬುಲೆನ್ಸ್ ಸಿಬ್ಬಂದಿ ಇಬ್ಬರು ಅನಗತ್ಯ ಚರ್ಚೆಗೆ ಇಳಿದು ಪ್ರಶ್ನೆಗಳ ಸುರಿಮಳೆಯನ್ನು ಕೇಳ್ತಾರೆ. ಮತ್ತೇ ಕೊನೆಗೆ 1 ಗಂಟೆ ಆಗುತ್ತೇ ಕಾಯ್ತೀರಾ ಅಥವಾ ಖಾಸಗಿ ವಾಹನದಲ್ಲಿ ಹೋಗ್ತೀರಾ ಎಂಬ ಪ್ರಶ್ನೆಯನ್ನು ಕೇಳುವುದು ಸಾಮಾನ್ಯವಾಗಿದೆ.