ತುಮಕೂರು:ಹಲವು ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಳೆ ತುಮಕೂರಿಗೆ ಭೇಟಿ ನೀಡಲಿದ್ದು, ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ ನಡೆಸುವುದಾಗಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಮೋದಿ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ: ಕೋಡಿಹಳ್ಳಿ ಚಂದ್ರಶೇಖರ್ - ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ
ಪ್ರಧಾನಿ ನರೇಂದ್ರ ಮೋದಿ ಜನವರಿ 2 ರಂದು ತುಮಕೂರಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ನಡೆಯುವ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ ಮಾಡುವುದಾಗಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ರಾಜ್ಯಕ್ಕೆ ನೆರೆ ಪರಿಹಾರ ಹಣವನ್ನು ಬಿಡುಗಡೆ ಮಾಡುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದರೂ, ಸತಾಯಿಸುತ್ತಿದ್ದಾರೆ. ಆದರೆ ಬಿಹಾರ, ಉತ್ತರ ಪ್ರದೇಶ ಸೇರಿದಂತೆ ವಿವಿಧ ಭಾಗದ ರೈತರಿಗೆ 6,000 ಕೋಟಿ ರೂ. ನೆರೆ ಪರಿಹಾರ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ರಾಜ್ಯದ ರೈತರನ್ನು ಪದೇ ಪದೇ ಕಡೆಗಣಿಸುತ್ತಿದ್ದಾರೆ. ಪ್ರಧಾನಿಯವರ ಈ ಧೋರಣೆಯನ್ನು ಖಂಡಿಸಿ ತುಮಕೂರಿಗೆ ಆಗಮಿಸುತ್ತಿರುವ ಅವರ ಕಾರ್ಯಕ್ರಮದಲ್ಲಿ ಧಿಕ್ಕಾರ ಮತ್ತು ಘೋಷಣೆಗಳನ್ನು ಕೂಗದೆ ಮೌನವಾಗಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸುವುದಾಗಿ ಅವರು ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ನಮ್ಮ ಹಕ್ಕಾಗಿದೆ ನಾವು ಶೋಷಿತ ಜನರಾಗಿದ್ದೇವೆ. ಪ್ರಧಾನಿ ಅವರು ನಮ್ಮ ರಾಜ್ಯದ ರೈತರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.