ತುಮಕೂರು :ಶಿರಾ ಉಪ ಚುನಾವಣೆಯಲ್ಲಿ ಹಿಂದುಳಿದ ವರ್ಗದ ವ್ಯಕ್ತಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯವಿದೆ. ಅದರಲ್ಲಿ ನಾನು ಕೂಡ ಒಬ್ಬ ಆಕಾಂಕ್ಷಿಯಾಗಿದ್ದೇನೆ. ಆದರೆ, ಬೇರೊಬ್ಬರಿಗೆ ಟಿಕೆಟ್ ಕೊಡಬೇಡಿ ಎಂದು ಹೇಳುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಕೆ ಎನ್ ರಾಜಣ್ಣ ತಿಳಿಸಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಜೊತೆ ಮಾತನಾಡಿದ್ದೇನೆ. ಅಲ್ಲದೆ ಸೆ. 16ರಂದು ಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಅದರಲ್ಲಿ ನಾನು ಪಾಲ್ಗೊಳ್ಳಲಿದ್ದೇನೆ ಎಂದರು. ಶಿರಾದಲ್ಲಿ ಉಪ ಚುನಾವಣೆಗೆ ಸ್ಪರ್ಧಿಸಿ ಎರಡು ವರ್ಷಗಳ ಕಾಲ ಭಾಷಣ ಮಾಡಲು ಹೋಗುವುದಿಲ್ಲ.
ಅದರ ಬದಲಾಗಿ ಎರಡು ವರ್ಷದ ನಂತರ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಆಗ ಮಧುಗಿರಿ ಕ್ಷೇತ್ರಕ್ಕೆ ಸ್ಪರ್ಧಿಸಲಿದ್ದೇನೆ. ಜನರು ಕೂಡ ಈ ಬಾರಿ ನನ್ನ ಬಗ್ಗೆ ಒಲವು ತೋರಿದ್ದಾರೆ ಎಂದು ತಿಳಿಸಿದರು. ಶಿರಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ. ಜೆಡಿಎಸ್ನವರು ತಮ್ಮ ಕ್ಷೇತ್ರ ಬಿಟ್ಟುಕೊಡಲಾರರು. ಬಿಜೆಪಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ತುದಿಗಾಲ ಮೇಲೆ ನಿಂತಿದೆ.
ಇನ್ನು, ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಅಧಿಕಾರ ವಹಿಸಿಕೊಂಡ ಬಳಿಕ ಇದು ಮೊದಲ ಚುನಾವಣೆ. ಶತಾಯಗತಾಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಯತ್ನ ಮಾಡುವ ಮೂಲಕ ರಾಜ್ಯಕ್ಕೆ ಒಂದು ಸ್ಪಷ್ಟ ಸಂದೇಶ ನೀಡಲು ಬಯಸುತ್ತಿದ್ದಾರೆ ಎಂದು ವಿಶ್ಲೇಷಣೆ ಮಾಡಿದರು.
ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಬಿಎಸ್ವೈ ಬಿಟ್ಟರೆ ಬಿಜೆಪಿ ಕಣ್ಮರೆ :ಮುಖ್ಯಮಂತ್ರಿ ಸ್ಥಾನದಿಂದ ಬಿ ಎಸ್ ಯಡಿಯೂರಪ್ಪನವರನ್ನು ಬದಲಾವಣೆ ಮಾಡಿದ್ರೆ ಬಿಜೆಪಿ ಪಕ್ಷವೇ ಕಣ್ಮರೆಯಾಗಲಿದೆ. ಅದೇ ರೀತಿ ಜೆಡಿಎಸ್ಗೆ ಮಾಜಿ ಪ್ರಧಾನಿ ದೇವೇಗೌಡ, ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಅವರು ಇಲ್ಲದಿದ್ದರೆ ಪಕ್ಷಗಳ ಇರುವುದಿಲ್ಲ. ಈ ಮೂವರು ಮತಗಳನ್ನು ಸೆಳೆಯುವಂತಹ ಶಕ್ತಿ ಹೊಂದಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.