ತುಮಕೂರು: ಮೈಸೂರು ದಸರಾ, ಬೆಂಗಳೂರು ಕರಗ ಮಹೋತ್ಸವದ ರೀತಿಯಲ್ಲೇ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟೀಕೆರೆಯ 'ಕಾರು ಹಬ್ಬ'ವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಹಬ್ಬ ಬಂತೆಂದರೆ ಸಾಕು ಗ್ರಾಮದ ಪ್ರತಿಯೊಬ್ಬ ಜನಾಂಗದವರಿಗೆ ಸಂಭ್ರಮ ಇಮ್ಮಡಿಯಾಗುತ್ತದೆ. ಎಲ್ಲಾ ವರ್ಗದವರು ಈ ಆಚರಣೆಯಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿ ಗ್ರಾಮದ ಶ್ರೇಯೋಭಿವೃದ್ಧಿಗೆ ಸಾಥ್ ನೀಡುತ್ತಾರೆ.
800 ವರ್ಷಗಳ ಹಿಂದೆ ಗ್ರಾಮದ ಶ್ರೇಯಸ್ಸಿಗೆ ಬಲಿದಾನ ನೀಡಿದ ಹೆಬ್ಬಾರಯ್ಯ ಎಂಬುವರ ಸಂಕಲ್ಪವನ್ನು ಇಂದಿಗೂ ಇಲ್ಲಿನ ಗ್ರಾಮಸ್ಥರು ಮುಂದುವರೆಸಿಕೊಂಡು ಬಂದಿದ್ದಾರೆ. ಹಾಗಾಗಿ ಶೆಟ್ಟೀಕೆರೆರೆ ಕಾರು ಹಬ್ಬವನ್ನು ಗಡಿ ಕಾರು ಹಬ್ಬವೆಂದೂ ಬಣ್ಣಿಸಲಾಗುತ್ತಿದೆ. ವಿಜಯನಗರ ಸಾಮ್ರಾಜ್ಯದ ವೇಳೆಯಲ್ಲಿ ಹೆಬ್ಬಾರಯ್ಯ ಎಂಬುವರ ಬಲಿದಾನದಿಂದ ಈ ಕಾರು ಹಬ್ಬ ಶುರುವಾಗಿದ್ದು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಜ್ಯೇಷ್ಠ ಪೌರ್ಣಮಿ ದಿನದಂದು ಈ ಆಚರಣೆಯನ್ನು ನಡೆಸಲಾಗುತ್ತದೆ. ಗ್ರಾಮದ ಮಧ್ಯಭಾಗದಲ್ಲಿರೋ ಬ್ರಹ್ಮಲಿಂಗಕ್ಕೆ ವರ್ಷಕ್ಕೆ ಎರಡು ದಿನ ಮಾತ್ರ ಪೂಜೆ ನಡೆಯುವುದು ಇಲ್ಲಿನ ಮತ್ತೊಂದು ವಿಶೇಷ.
ಮೊದಲ ದಿನ ಕರುಗಲ್ಲಿನ ಮಂಟಪಕ್ಕೆ ಸುಣ್ಣ-ಬಣ್ಣ ಬಳಿದು ಹಸಿರು ತೋರಣ, ಬೇವಿನ ಸೊಪ್ಪು ಕಟ್ಟಿ ಭತ್ತದ ತೆನೆಯನ್ನು ಹೆಣೆದು ಮಂಪಟದ ಶಿಖರದ ಸುತ್ತ ಕಟ್ಟಿ ಶಿಖರದ ಮೇಲೆ ಮೂರು ಕಳಸ ಸ್ಥಾಪಿಸಲಾಗುತ್ತದೆ. ಈ ಹಬ್ಬದ ವ್ಯವಸ್ಥೆಯಲ್ಲಿ ಎಲ್ಲಾ ಕೋಮಿನವರು ಭಾಗಿಯಾಗುತ್ತಾರೆ. ಕರಗ ಒಡೆಯುವ ಜವಾಬ್ದಾರಿ ಗೌಡಾಳಿಕೆ ಜನಾಂಗದವರಿಗೆ, ಪೂಜೆ ಮಾಡುವುದು ಬ್ರಾಹ್ಮಣ ಸಮುದಾಯದವರಿಗೆ, ಕುಂಬಾರರಿಗೆ ಕಳಸ ಹಾಗೂ ಕರಗ ಮಾಡುವ ಜವಾಬ್ದಾರಿ, ತಳವಾರರಿಗೆ ಬೇವಿನ ಸೊಪ್ಪು, ಭತ್ತದ ತೆನೆ ಕಟ್ಟುವ, ಹರಿಜನ ಜನಾಂಗದವರಿಗೆ ಮತ್ತೊಂದು ಮಗದೊಂದು ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯ ಎನ್ನುತ್ತಾರೆ ಸ್ಥಳೀಯರು.