ತುಮಕೂರು: ಒಂದಕ್ಕಿಂತ ಒಂದು ಚಿರತೆಯ ವೇಗದಲ್ಲಿ ಭರ್ರನೇ ಆಳೆತ್ತರಕ್ಕೆ ಧೂಳೆಬ್ಬಿಸುತ್ತ ಚಲಿಸುತ್ತಿದ್ದವು. ಅವುಗಳನ್ನು ಕಂಡು ಕೆಲವರು ಜೋರಾಗಿ ಸಿಳ್ಳೆ, ಕೂಗು ಹಾಕಿದರೆ, ಹಲವರು ಚಪ್ಪಾಳೆ ತಟ್ಟಿ ಹುರುದುಂಬಿಸುತ್ತಿದ್ದರು. ಹೌದು, ಇದು ಗುಬ್ಬಿ ತಾಲೂಕು ವಿರೂಪಾಕ್ಷಿಪುರ ಬಳಿ ಶನಿವಾರ ಹಾಗೂ ಭಾನುವಾರ ಕರ್ನಾಟಕ ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ 46ನೇ ಕರ್ನಾಟಕ ಕೆ. 1000 ಕಾರು ರೇಸ್‌ನಲ್ಲಿ ಕಂಡುಬಂದ ದೃಶ್ಯಗಳಿವು. ಪ್ರತಿ ವರ್ಷದಂತೆ ಈ ಬಾರಿಯೂ ಕಾರು ರೇಸ್ 2 ದಿನ ಪ್ರೇಕ್ಷಕರಿಗೆ ರಸದೌತಣ ನೀಡಿತು.
ಅದಲಗೆರೆ, ನಾಗಲಾಪುರ, ಬೊಮ್ಮರಸನಹಳ್ಳಿ, ಎತ್ತಿನಹೊಳೆ, ಶಿವಸಂದ್ರ ಹತ್ಯಾಳ್, ಕೊಂಡ್ಲಿ, ಭೋಗಸಂದ್ರದ ರಸ್ತೆಗಳಲ್ಲಿ ಝಗಮಗಿಸುತ್ತಿದ್ದ ನಾನಾ ಮಾಡೆಲ್‌ನ ಕಾರುಗಳ ವೇಗದ ಓಟ, ರಸ್ತೆ ತಿರುವಿನಲ್ಲಿಯೂ ಬಗೆಬಗೆಯ ಸೌಂಡ್ ಮಾಡಿಕೊಂಡು, ಧೂಳೆಬ್ಬಿಸಿಕೊಂಡು ಹೋಗುತ್ತಿದ್ದ ದೃಶ್ಯಗಳು ಮೈ ಜುಮ್ಮೆನಿಸುವಂತಿತ್ತು. ಇದನ್ನು ಹತ್ತಿರದಿಂದ ನೋಡುವುದೇ ಪ್ರೇಕ್ಷಕರಿಗೆ ಹಬ್ಬದ ವಾತಾವರಣ ಕಲ್ಪಿಸಿತ್ತು.
ರೇಸ್‌ನಲ್ಲಿ ಸುಮಾರು 72 ಕಾರುಗಳು ಭಾಗವಹಿಸಿದ್ದವು. ಮಹಿಳೆಯರೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಅಲ್ಲದೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡವರು ರೇಸ್‌ಗಿಳಿದಿದ್ದರು.