ತುಮಕೂರು: ಕಾಲ ಎಷ್ಟೇ ಮುಂದುವರೆದರೂ ಕೆಲವು ಮೂಢ ಆಚರಣೆಗಳು ಇನ್ನೂ ನಿಂತಿಲ್ಲ. ಮಹಿಳೆಯರು ಮುಟ್ಟಾದಾಗ ಅಥವಾ ಹೆರಿಗೆಯಾದ ಸಂದರ್ಭಗಳಲ್ಲಿ ಅವರನ್ನು ಸೂತಕ ಸಂಪ್ರದಾಯದ ಹೆಸರಿನಲ್ಲಿ ಮನೆಯಿಂದ ಹೊರಗಿಡುವ ಪದ್ಧತಿ ಇನ್ನೂ ಕೊನೆಗೊಂಡಿಲ್ಲ. ಆ ಕಾರಣಕ್ಕಾಗಿ ಗೊಲ್ಲರಹಟ್ಟಿಯಲ್ಲಿ ಮೌಢ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳು ಇಂದಿಗೂ ಮುಂದುವರೆದಿವೆ.
ಗುಬ್ಬಿ ತಾಲೂಕು ಹಾಗಲವಾಡಿ ಹೋಬಳಿ ಜುಂಜಪ್ಪನಹಟ್ಟಿಗೆ ಇಂದು ನ್ಯಾಯಾಧೀಶೆ ಉಂಡಿ ಮಂಜುಳ ಶಿವಪ್ಪ ಭೇಟಿ ನೀಡಿ ಜನರಲ್ಲಿ ಸೂತಕ ಸಂಪ್ರದಾಯದ ಬಗ್ಗೆ ಜಾಗೃತಿ ಮೂಡಿಸಿದರು. ಮಹಿಳೆಯರನ್ನು ಹೊರಗಡೆ ಇರಿಸುವ ಕೃಷ್ಣ ಕುಟೀರಕ್ಕೆ ಬೀಗ ಹಾಕಿಸಿ, ಮನೆಯಲ್ಲಿಯೇ ಆರೈಕೆ ಮಾಡುವಂತೆ ಮನವಿ ಮಾಡಿದರು.
ಗೊಲ್ಲರಹಟ್ಟಿಗಳಲ್ಲಿ ಸೂತಕದ ಸಂದರ್ಭದಲ್ಲಿ ಮಹಿಳೆಯರನ್ನು ಈ ಕೃಷ್ಣ ಕುಟೀರದಲ್ಲಿಡಲಾಗುತ್ತಿದೆ. ಕುಟೀರಗಳಿಲ್ಲದ ಹಟ್ಟಿಗಳಲ್ಲಿ ಗುಡಿಸಲು ನಿರ್ಮಿಸಿ ಮಹಿಳೆಯರನ್ನು ಮನೆಯಿಂದ ಹೊರಗಿಡುವ ಸಂಪ್ರದಾಯದಿಂದ ಅನೇಕ ಪ್ರಾಣ ಹಾನಿಯೂ ಸಂಭವಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಾಧೀಶೆ ಉಂಡಿ ಮಂಜುಳ ಶಿವಪ್ಪ, "ಇಲ್ಲಿನ ಜನರ ಸಂಪ್ರದಾಯದಂತೆ ಗೊಲ್ಲರಹಟ್ಟಿಯಲ್ಲಿ ಅನೇಕ ಕೃಷ್ಣ ಕುಟೀರಗಳನ್ನು ನಿರ್ಮಾಣ ಮಾಡಲಾಗಿದೆ. ಇದು ಮೌಢ್ಯಾಚರಣೆಯನ್ನು ತೊಡೆದು ಹಾಕುವ ಬದಲು ಮುಂದುವರೆಸಲು ಪ್ರೇರೇಪಿಸುವಂತಿದೆ. ಮೊದಲು ಇಂತಹ ಕೃಷ್ಣ ಕುಟೀರಗಳಿಗೆ ಬೀಗ ಹಾಕಿ ಬಂದ್ ಮಾಡಬೇಕು. ಮಹಿಳೆಯರನ್ನು ತಮ್ಮ ಮನೆಗಳಲ್ಲಿಯೇ ಇರಿಸಿಕೊಂಡು ಅವರ ಆರೋಗ್ಯವನ್ನು ಕಾಪಾಡಬೇಕಿದೆ" ಎಂದು ಹೇಳಿದರು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಬಿ.ಕೆ.ಚಿದಾನಂದ್, ಕಾರ್ಯದರ್ಶಿ ಸುರೇಶ್, ಕಾನೂನು ಸೇವಾ ಸಮಿತಿಯ ಸಿಬ್ಬಂದಿ ಕೃಷ್ಣ ಉಪಸ್ಥಿತರಿದ್ದರು.