ತುಮಕೂರು :ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆ ಪ್ರಾರಂಭಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಈಗಾಗಲೇ ಮೂರು ಜಿಲ್ಲೆಗಳಲ್ಲಿ ಜೆಡಿಎಸ್ ರಥಯಾತ್ರೆ ಯಶಸ್ವಿಯಾಗಿದ್ದು, ತುಮಕೂರು ಜಿಲ್ಲೆಗೆ ಪಂಚರತ್ನ ರಥಯಾತ್ರೆ ಕಾಲಿಟ್ಟಿದೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕ್ರಮಗಳಲ್ಲಿ ರೌಡಿಶೀಟರ್ ಗಳು ಭಾಗಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಅದಕ್ಕೆಲ್ಲ ಪ್ರಾಮುಖ್ಯತೆ ಕೊಡಲ್ಲ. ನನ್ನ ಗುರಿ ಇರೋದು ಪಂಚರತ್ನ ಯಾತ್ರೆ ಮೂಲಕ ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು. ಯಾರ ಪಕ್ಷದಲ್ಲಿ ಯಾರನ್ನು ಸೇರಿಸಿಕೊಳ್ತಾರೆ, ಯಾರನ್ನು ಕಳುಹಿಸ್ತಾರೆ ಎಂಬುದು ನನಗೆ ಬೇಡದ ವಿಚಾರವಾಗಿದೆ ಎಂದರು.
ತುಮಕೂರು ನಗರ ಕ್ಷೇತ್ರದಲ್ಲಿ ಟಿಕೆಟ್ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಎರಡು ಬಾರಿ ಕಡಿಮೆ ಅಂತರದಲ್ಲಿ ಸೋತ ಗೋವಿಂದರಾಜು ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದ್ದಾರೆ. ಗೋವಿಂದರಾಜುಗೆ ಟಿಕೆಟ್ ಕೊಡಲು ತೀರ್ಮಾನ ಆಗಿದೆ. ಇದರ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ತುಮಕೂರಿನ 11 ಕ್ಷೇತ್ರದಲ್ಲಿ ಜೆಡಿಎಸ್ಗೆ ಗೆಲುವು : ತಿಪಟೂರು ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಯಾವುದೇ ಅಭ್ಯರ್ಥಿ ಇಲ್ಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸೂಕ್ತ ಅಭ್ಯರ್ಥಿಯನ್ನು ಹಾಕಲಾಗುವುದು. ಈ ಬಾರಿ ಶಿರಾದಲ್ಲಿಯೂ ಕೂಡಾ ಜೆಡಿಎಸ್ ಗೆಲ್ಲುತ್ತೆ. ತುಮಕೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುತ್ತೆ. ಈ ಬಾರಿ ಅತಂತ್ರ ಫಲಿತಾಂಶ ಬರುವ ಪ್ರಶ್ನೆಯೇ ಇಲ್ಲ. ಇನ್ನು ಜೆಡಿಎಸ್ 123 ಸ್ಥಾನ ಗಳಿಸಿ ಅಧಿಕಾರಕ್ಕೆ ಬಂದೇ ಬರುತ್ತದೆ. ಹಂತ ಹಂತವಾಗಿ ಇಡೀ ರಾಜ್ಯಾದ್ಯಂತ ಪಂಚರತ್ನ ಯಾತ್ರೆ ಹೋಗುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.