ತುಮಕೂರು : ಜೆಡಿಎಸ್ ಪಕ್ಷವನ್ನು ತೊರೆದ ಗುಬ್ಬಿ ಪಟ್ಟಣ ಪಂಚಾಯತಿಯ 9 ಜನ ಸದಸ್ಯರು ಪ್ರತ್ಯೇಕ ಗುಬ್ಬಿ ಹಿತರಕ್ಷಣಾ ಪಕ್ಷ ಸ್ಥಾಪಿಸಿದ್ದಾರೆ. ಜೊತೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆಯೇ ಗುಬ್ಬಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಎಸ್.ಆರ್ ಶ್ರೀನಿವಾಸ್ ಅವರಿಗೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗುಬ್ಬಿ ಪಟ್ಟಣ ಪಂಚಾಯತ್ ಜೆಡಿಎಸ್ ಸದಸ್ಯ ಸಿದ್ದರಾಮಣ್ಣ, ಗುಬ್ಬಿ ಕ್ಷೇತ್ರದಲ್ಲಿನ ಜೆಡಿಎಸ್ ಅಭ್ಯರ್ಥಿ ವಿರುದ್ಧ ಅಸಮಾಧಾನ ಹೊರಹಾಕಿದರು. ಪಟ್ಟಣ ಪಂಚಾಯತಿ ಸದಸ್ಯರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಗುಬ್ಬಿ ಕ್ಷೇತ್ರದಲ್ಲಿ ನಡೆದ ಜೆಡಿಎಸ್ ಪಂಚರತ್ನ ಯಾತ್ರೆ, ವಿವಿಧ ಜೆಡಿಎಸ್ ಸಭೆ ಸಮಾರಂಭ, ವಿವಿಧ ಕಾರ್ಯಕ್ರಮಗಳಿಗೆ ಆಹ್ವಾನ ನೀಡದೇ ನಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಎಸ್.ಆರ್ ಶ್ರೀನಿವಾಸ್ ಅವರು ಜೆಡಿಎಸ್ ಪಕ್ಷವನ್ನು ತೊರೆದ ನಂತರ ಗುಬ್ಬಿ ಪಟ್ಟಣ ಪಂಚಾಯಿತಿಯಲ್ಲಿನ ಜೆಡಿಎಸ್ ಪಕ್ಷದ 9 ಜನ ಸದಸ್ಯರನ್ನು ಕಡೆಗಣಿಸಲಾಗಿದೆ. ಅಲ್ಲದೆ ಗುಬ್ಬಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಗರಾಜ್ ನಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ. ನಮಗೆ ಜೆಡಿಎಸ್ ಪಕ್ಷದ ಮೇಲೆ ಯಾವುದೇ ಅಸಮಾಧಾನ ಇಲ್ಲ. ನಮಗೆ ಕೇವಲ ಗುಬ್ಬಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ನಾಗರಾಜ್ ಮೇಲೆ ಅಸಮಾಧಾನ ಇದೆ ಎಂದು ಹೇಳಿದರು.