ತುಮಕೂರು :ನಮ್ಮ ಮನೆಗೆ ಅಡ್ಡಪಲ್ಲಕ್ಕಿ ತಂದವರು ನೀವು, ದೇವೇಗೌಡರು ನಿಮ್ಮನ್ನ ನಂಬಿದ್ರು. ನಾನಂತೂ ನಿಮ್ಮನ್ನ ನಂಬಿರಲಿಲ್ಲಾ. ನೀವು ಅಡ್ಡಪಲ್ಲಕ್ಕಿಲಿ ಕೂರಿಸಿಕೊಂಡು ಹೋಗಿ ಅರ್ಧ ದಾರಿಯಲ್ಲಿ ಕೈಬಿಟ್ರಿ ಎಂದು ಕಾಂಗ್ರೆಸ್ ಮುಖಂಡರಿಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಶಿರಾ ತಾಲೂಕಿನ ಕಳ್ಳಂಬೆಳ್ಳದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿರಾ ಜನರು ಎಂದೂ ಕೂಡ ಹಣಕ್ಕೆ ಮತ ಕೊಟ್ಟವರಲ್ಲ. ದುಡಿಮೆಗೆ ಗೌರವ ಕೊಟ್ಟವರು. ಮೊನ್ನೆಯ ಸಭೆಯಲ್ಲಿ ಹಾಲನ್ನಾದ್ರೂ ಕೊಡಿ, ವಿಷವಾದ್ರೂ ಕೊಡಿ ಎಂದು ಹೇಳಿದ್ದೆ. ಅವತ್ತು ನಾನು ಕಣ್ಣಲ್ಲಿ ನೀರು ಹಾಕಿಲ್ಲ. ನಾವೆಲ್ಲಾ ಹಳ್ಳಿಯಿಂದ ಬಂದವರು, ಹಳ್ಳಿ ಭಾಷೆಯ ವಾಡಿಕೆಯಂತೆ ಕೇಳಿದ್ದೆ. ಆ ಮಹಾನುಭಾವ ಕುಮಾರಸ್ವಾಮಿಗೆ ಕಷಾಯ ಕೊಡಿ ಎಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿಯವರು ಕಷಾಯನೂ ಕೊಡಲಾಗದ ಪರಿಸ್ಥಿತಿಗೆ ತಂದಿಟ್ಟಿದ್ದಾರೆ. ಪೇಪರ್ ಟೈಗರ್ ಮೈಸೂರಿಗೆ ಏನು ಕೊಡುಗೆ ಕೊಟ್ಟಿದ್ದಾರೆ ಗೊತ್ತಿಲ್ಲಾ ಎಂದು ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿದರು.
ಸಿದ್ದರಾಮಯ್ಯನವರು ಜೆಡಿಎಸ್ ಪಕ್ಷವೇ ಇಲ್ಲಾ ಎಂದಿದ್ದಾರೆ. ಸಿದ್ದರಾಮಯ್ಯನವರಿಗೆ ತಾಯಿ ಸಮಾನವಾದ ಪಕ್ಷ ಇದು. ಅವರು ಇದ್ದಾರೆ ಎಂದು ಗೊತ್ತಾಗಿದ್ದೇ ಜೆಡಿಎಸ್ ಪಕ್ಷದಿಂದ. ಜೆಡಿಎಸ್ ಪಕ್ಷ ಇನ್ನೊಬ್ಬರ ಹೆಗಲ ಮೇಲೆ ರಾಜಕಾರಣ ಮಾಡಬೇಕಾಗಿದೆ ಎಂದಿದ್ದಾರೆ. ನಾವೇನಾದ್ರೂ ನಿಮ್ಮ ಹೆಗಲು ಕೇಳಿಕೊಂಡು ಮನೆಗೆ ಬಂದಿದ್ವಾ ಎಂದು ಪ್ರಶ್ನಿಸಿದರು.