ತುಮಕೂರು: ನಾನೀಗ ಕೆ.ಆರ್.ಪೇಟೆಗೆ ಹೋಗಿ ಸೊನ್ನೆಯಿಂದ ಮಗ್ಗಿ ಬರೆಯಬೇಕಿದೆ ಎಂದು ಉಪಚುನಾವಣೆಯ ತಯಾರಿಯನ್ನು ಸಚಿವ ಮಾಧುಸ್ವಾಮಿ ವಿಶ್ಲೇಷಣೆ ಮಾಡಿದ್ದಾರೆ.
ಕೆ.ಆರ್.ಪೇಟೆ ಕ್ಷೇತ್ರದ ಉಪಚುನಾವಣಾ ಕಣದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಸಚಿವ ಮಾಧುಸ್ವಾಮಿ ತುಮಕೂರು ಜಿಲ್ಲೆಯಿಂದಲೇ ಸದ್ದಿಲ್ಲದೆ ಚಾಲನೆ ನೀಡಿದ್ದಾರೆ. ತುರುವೇಕೆರೆ ಹೋಬಳಿ ಸಿ.ಎಸ್.ಪುರ ಹೋಬಳಿಯ ಮಾವಿನಹಳ್ಳಿ ಕೆರೆಗೆ ಹೇಮಾವತಿ ನೀರು ಹರಿಸಿರುವ ಹಿನ್ನೆಲೆಯಲ್ಲಿ ಅವರು ಬಾಗಿನ ಅರ್ಪಿಸಿದರು. ನಂತರ ನೆರೆದಿದ್ದ ಸ್ಥಳೀಯರಿಗೆ ತಮ್ಮ ಕೆ.ಆರ್. ಪೇಟೆ ಉಪಚುನಾವಣೆಯ ಜವಾಬ್ದಾರಿಯ ಬಗ್ಗೆ ವಿವರಿಸಿದ್ರು.
ನಿಮ್ಮ ನೆಂಟರು ಇದ್ದರೆ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಸಿ, ಬರೀ ಹೊಗಳಿದರೆ ಸಾಲದು. ಈ ಉಪ ಚುನಾವಣೆಯಲ್ಲಿ ಸಹಾಯ ಮಾಡಿ ಎಂದು ಬಂಧು ಬಳಗಕ್ಕೆ ಹೇಳಿ ಅಂತ ತುರುವೇಕೆರೆ ಕ್ಷೇತ್ರದ ಮತದಾರರಲ್ಲಿ ಅವರು ಮನವಿ ಮಾಡಿದ್ರು.
ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸದೃಢವಾಗುವುದು ಕಷ್ಟ ಎಂಬ ಭಾವನೆ ಇದೆ. ಹೇಮಾವತಿ ನೀರನ್ನು ಹರಿಸಿದ್ದೀಯ, ನಿನಗೆ ಮಾತನಾಡಲು ಶಕ್ತಿ ಇದೆ ಎಂದು ಕೆ.ಆರ್. ಪೇಟೆ ಉಪಚುನಾವಣೆಯ ಉಸ್ತುವಾರಿ ವಹಿಸಿದ್ದೇನೆ, ಓಟು ಹಾಕಿಸು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ. ಎಲ್ಲರಿಗೂ 25 ಅಥವಾ 30 ರಿಂದ ಮಗ್ಗಿ ಬರೆಯಲು ಹೇಳುತ್ತೀರಾ. ಆದರೆ, ನನಗೆ ಸೊನ್ನೆಯಿಂದ ಮಗ್ಗಿ ಬರೆಯಲು ಕೆ.ಆರ್.ಪೇಟೆಗೆ ಕಳುಸುತ್ತೀರಾ ಎಂದು ಬಿಎಸ್ವೈ ಅವರಿಗೆ ತಿಳಿಸಿದೆ. ನಿನಗೆ ಶಕ್ತಿ ಇದೆ ಹೋಗಿ ಕೆಲಸ ಮಾಡು ಎಂದಿದ್ದಾರೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.