ತುಮಕೂರು:ಸತತ 2 ವರ್ಷ 5 ತಿಂಗಳ ಕಾಲ ರಾಜ್ಯದಲ್ಲಿ ಬಹಳ ದೊಡ್ಡ ಹೋರಾಟ ಹಾಗೂ ಚಳವಳಿಯನ್ನು ಮಾಡಲಾಯಿತು. ಮೊದಲ ಹಂತದಲ್ಲಿ ಯಶಸ್ಸು ಪಡೆಯಲಾಗಿದೆ. ಪಂಚಮಸಾಲಿ ಲಿಂಗಾಯತ ಮೀಸಲಾತಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕೂಡಲಸಂಗಮ ಮಠದ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮೆಲ್ಲರ ಆರಾಧ್ಯ ದೈವ ಆಗಿರುವ ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ಗೌರವ ನಮನ ಸಲ್ಲಿಸಿ, ಪರಮ ಪೂಜ್ಯ ಸಿದ್ದಲಿಂಗ ಶ್ರೀಗಳ ಅಶೀರ್ವಾದ ಪಡೆದಿದ್ದೇವೆ. ನಮ್ಮ ಈ ಐತಿಹಾಸಿಕ ಹೋರಾಟಕ್ಕೆ ಪಕ್ಷಾತೀತ, ಜಾತ್ಯತೀತವಾಗಿ ಯಾರೆಲ್ಲ ಸಹಕಾರ ಹಾಗೂ ನಮ್ಮ ಯಶಸ್ಸಿಗೆ ಬೆಂಬಲ ಕೊಟ್ಟಿದ್ದಾರೋ ಅವರೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.
ರಾಜ್ಯದ 48 ಭಾಗದಲ್ಲಿ ಮೊದಲ ಹಂತದ ಬೃಹತ್ ಪ್ರವಾಸ: ಇಂದಿನಿಂದ ರಾಜ್ಯದಲ್ಲಿ ಶರಣು ಒಂದಾನು ಎಂಬ ಯಾತ್ರೆ ಆರಂಭಿಸುವ ಮೂಲಕ 10 ನೇ ತಾರೀಖಿನವರೆಗೆ ರಾಜ್ಯದ 48 ಭಾಗದಲ್ಲಿ ಮೊದಲ ಹಂತದ ಬೃಹತ್ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಪೂಜ್ಯರ ಅಶೀರ್ವಾದ ಪಡೆದುಕೊಂಡು ಹೋಗ್ಬೇಕು ಅಂತ ಶ್ರೀ ಮಠಕ್ಕೆ ಬಂದಿದ್ದೇನೆ. ಈ ಒಂದು ಹೋರಾಟಕ್ಕೆ 2D ಎಂಬ ಹೊಸ ಮೀಸಲಾತಿ ನಮ್ಮ ಸಮುದಾಯಕ್ಕೆ ನೀಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಿದ್ದಗಂಗಾ ಮಠದ ಫಲವೇ ನಮ್ಮ ಹೋರಾಟಕ್ಕೆ ಜಯ: ನಾವು ಕೇಳಿದ್ದು ಲಿಂಗಾಯತ ಪಂಚಮಸಾಲಿ ಹಾಗೂ ಲಿಂಗಾಯತ ಉಪನಾಮಗಳಿಗೆ ಮೀಸಲಾತಿ. ಆದರೆ ಸರ್ಕಾರ ಎಲ್ಲಾ ಲಿಂಗಾಯತ ಒಳಪಂಗಡಗಳನ್ನು ಒಳಗೊಂಡಂತೆ ಹೊಸ ಪ್ರವರ್ಗವನ್ನು ಸೃಷ್ಟಿಸಿದೆ. ಈ ಮೂಲಕ ಆರಂಭದಲ್ಲಿ ನ್ಯಾಯ ಕೊಡುವಂತಹ ಕೆಲಸವನ್ನು ಮಾಡಿದೆ.