ತುಮಕೂರು: ಜಿಲ್ಲೆಯ ಬಂಧಿಖಾನೆಯಲ್ಲಿರುವ ಆರೋಪಿಗಳನ್ನು ನೋಡಲು ಬಂದವರಿಂದ ಜೈಲಿನ ಸಿಬ್ಬಂದಿ ಹಣ ಪಡೆಯುತ್ತಿರುವ ಎಂಬ ಆರೋಪ ಕೇಳಿ ಬಂದಿದ್ದು, ಇದರ ಕುರಿತಾಗಿ ಹಾಗೂ ಜಿಲ್ಲಾ ಕಾರಾಗೃಹದಲ್ಲಿನ ಅವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಆರೋಪಿಗಳ ಸಂಬಂಧಿಕರು ದೂರು ನೀಡಿದ್ದಾರೆ. ಜಿಲ್ಲಾಧಿಕಾರಿ, ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಎಡಿಜಿಪಿ, ಲೋಕಾಯುಕ್ತ, ಮಾನವಹಕ್ಕುಗಳ ಆಯೋಗ ಹಾಗೂ ಗೃಹಸಚಿವರಿಗೆ ಆರೋಪಿಗಳ ಸಂಬಂಧಿಕರು ದೂರು ನೀಡಿದ್ದಾರೆ. ನಾಲ್ಕೈದು ಪುಟಗಳಲ್ಲಿ ನೀಡಿದ ದೂರಿನಲ್ಲಿ ಬಂಧಿಖಾನೆ ಸಮಸ್ಯೆಗಳ ವಿಸ್ಕೃತ ವಿವರಣೆ ನೀಡಿದ್ದಾರೆ.
ಸುಮಾರು 40ಕ್ಕೂ ಹೆಚ್ಚು ಬಂಧೀಖಾನೆಯ ಹಣ ಪೀಕುವ ಜೈಲಿನ ಸಿಬ್ಬಂದಿ ವಿರುದ್ಧ ವಿಚಾರಣಾಧೀನ ಕೈದಿಗಳ ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಅಲ್ಲದೇ ತುಮಕೂರು ತಾಲೂಕಿನ ಊರುಕೆರೆ ಬಳಿಯಿರುವ ಜಿಲ್ಲಾ ಕಾರಾಗೃಹ, ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಸಮರ್ಪಕವಾಗಿ ಊಟ ನೀಡದ ಅಧೀಕ್ಷಕರ ವಿರುದ್ದ ಆರೋಪ ಕೇಳಿ ಬಂದಿದೆ.
ವಿಚಾರಣಾಧೀನ ಕೈದಿಗಳಿಂದ ಪ್ರತಿಭಟನೆ: ಹಿಂದಿನ ವಾರ ಜೈಲಿನಲ್ಲಿ ಪ್ರತಿಭಟನೆ ನಡೆಸಿದ್ದ ವಿಚಾರಣಾಧೀನ ಕೈದಿಗಳು. ಕಳಪೆ ಗುಣಮಟ್ಟದ ಆಹಾರ ಹಾಗೂ ಜೈಲಿನ ಅಕ್ರಮಗಳನ್ನು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಆ ದೂರಿನ ಆಧಾರದ ಮೇರೆಗೆ ಸ್ಥಳಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಜೈಲರ ಅಧೀಕ್ಷಕಿ ಶಾಂತಶ್ರೀ ವಿರುದ್ದ ಆರೋಪಿಗಳ ಸಂಬಂಧಿಕರು ಅಸಮಾಧಾನದಿಂದ ದೂರು ನೀಡಿದ್ದರು.
ದೂರಿನಲ್ಲಿ ಏನೇನಿದೆ?ಇಲ್ಲಿಗೆ ಭೇಟಿ ನೀಡುವ ಎಲ್ಲ ಉನ್ನತ ಅಧಿಕಾರಿಗಳಿಗೆ ಮಾಸಿಕವಾಗಿ 1 ಲಕ್ಷ, 2 ಲಕ್ಷ ರೂ.ಗಳನ್ನು ಅಧಿಕಾರಿಗಳ ದರ್ಜೆಗೆ ತಕ್ಕಂತೆ ಲಂಚ ನೀಡುತ್ತಿದ್ದೇನೆ ಎಂದು ಅಧೀಕ್ಷಕಿ ಶಾಂತಶ್ರೀ ಎಂಬ ಹೇಳಿದ್ದು, ಅಷ್ಟೇ ಅಲ್ಲದೆ ನೀವು ಯಾವುದೇ ದೂರು ನೀಡಿದರೂ ಏನೇನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಎಲ್ಲ ಅಧಿಕಾರಿಗಳು ಇಲ್ಲಿಗೆ ಬರುವುದು ಮಾಮೂಲಿ ಲಂಚ ಪಡೆಯಲು ಹೊರತು ನಿಮ್ಮ ಯೋಗಕ್ಷೇಮ ವಿಚಾರಿಸಲು ಅಲ್ಲ.