ತುಮಕೂರು: ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ. ಜಿ ಪರಮೇಶ್ವರ್ ಅವರ ಒಡೆತನದ ಶಿಕ್ಷಣ ಸಂಸ್ಥೆಗಳು ಹಾಗೂ ಅವರ ಮನೆ, ಆಪ್ತರ ಮನೆಗಳ ಮೇಲೆ ದಾಳಿ ನಡೆಸಿರುವುದು ಹಾಗೂ ಜಾಲಪ್ಪ ಅವರ ಶಿಕ್ಷಣ ಸಂಸ್ಥೆಯ ಮೇಲೆ ನಡೆದ ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ಎನ್. ಮೂರ್ತಿ ಆರೋಪಿಸಿದ್ದಾರೆ.
ಪರಮೇಶ್ವರ್ ಮನೆ ಮೇಲಿನ ಐಟಿ ದಾಳಿ ರಾಜಕೀಯ ಪ್ರೇರಿತ : ಡಾ.ಎನ್.ಮೂರ್ತಿ ಆರೋಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿವಾದಿ, ಕೋಮುವಾದಿಯಾದ ಕೇಂದ್ರ ಬಿಜೆಪಿ ಸರ್ಕಾರ ಐಟಿ, ಇಡಿ, ಸಿಬಿಐ ಇಲಾಖೆಗಳನ್ನು ದುರುಪಯೋಗ ಪಡಿಸಿಕೊಂಡು ದಲಿತ ನಾಯಕರು, ದಲಿತ ಸಮುದಾಯದವರನ್ನು ತುಳಿಯುವ ಹುನ್ನಾರ ಮಾಡುತ್ತಿದೆ. ಇಂತಹ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ದೇಶದ ನಾಗರಿಕರು ಹಾಗೂ ದಲಿತ ಸಂಘರ್ಷ ಸಮಿತಿ ಉಗ್ರವಾಗಿ ಖಂಡಿಸುತ್ತದೆ. ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಡಾ.ಜಿ. ಪರಮೇಶ್ವರ್ ಅವರು ಶೋಷಿತರ ಮಕ್ಕಳಿಗೆ ಶಿಕ್ಷಣ ಹಾಗೂ ಜಾಗೃತಿ ಮೂಡಿಸುತ್ತಿದ್ದಾರೆ. ಅವರ ತಂದೆ ದಿ. ಗಂಗಾಧರಯ್ಯ ಅವರು ಶ್ರಮದಿಂದ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ಅವರ ಸಂಸ್ಥೆಯಲ್ಲಿ ಮೀಸಲಾತಿ ಪ್ರಕಾರ ದಲಿತರಿಗೆ ಶಿಕ್ಷಣ ಒದಗಿಸಿಕೊಟ್ಟಿದ್ದಾರೆ. ಅಂಥವರ ಮೇಲೆ ದಾಳಿ ನಡೆಸಿರುವುದು ಸರಿಯಲ್ಲ ಎಂದರು. ದೇಶದಾದ್ಯಂತ ಬಿಜೆಪಿ ಸರ್ಕಾರ ನಡೆಸುತ್ತಿರುವ ಸಂವಿಧಾನ ವಿರೋಧಿ ಚಟುವಟಿಕೆ ದಲಿತರು ಮತ್ತು ಶೋಷಿತರ ಮೇಲಿನ ದಾಳಿಗಳನ್ನು ನಿಲ್ಲಿಸಬೇಕು. ಧೈರ್ಯವಿದ್ದರೆ ಶ್ರೀಮಂತರು, ಮಠಾಧೀಶರು, ಹಣವಂತರ ಆದಾಯ ಮೂಲಗಳ ಮೇಲೆ ಜೊತೆಗೆ ಅಪರಾಧ ಮಾಡಿದವರ ಮೇಲೆ ದಾಳಿ ನಡೆಸಲಿ. ಶಿಕ್ಷಣ ಸಮಾನತೆಗಾಗಿ ಕಾನೂನು ರೂಪಿಸಲಿ ಎಂದು ಒತ್ತಾಯಿಸಿದರು.
ಪರಮೇಶ್ವರ್ ಅವರ ಆಪ್ತ ಕಾರ್ಯದರ್ಶಿ ರಮೇಶ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು. ಇದರಿಂದ ಮನನೊಂದ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಕುಟುಂಬದವರು ದೂರು ನೀಡಿದರೂ, ಅದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಐಟಿ ಇಲಾಖೆಯವರು ಕಾನೂನು ಬಾಹಿರವಾಗಿ ಭಯೋತ್ಪಾದಕರಂತೆ ಭೀತಿ ಹುಟ್ಟಿಸಿದ್ದೇ ಅವರ ಆತ್ಮಹತ್ಯೆಗೆ ಕಾರಣವಾಗಿದೆ. ಇದೀಗ ಅವರ ಕುಟುಂಬ ಬೀದಿ ಪಾಲಾಗಿದೆ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.