ತುಮಕೂರು: ದಿ ಮೂನ್ ಗೇಟ್ವೆ ಟು ದ ಸ್ಟಾರ್ಸ್ ಎಂಬ ಶೀರ್ಷಿಕೆಯಡಿ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವತಿಯಿಂದ ನಗರದ ಬಾಲ ಭವನದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ವಿಶ್ವ ಅಂತರಿಕ್ಷ ಸಪ್ತಾಹ 2019 ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಕೆ ರಾಕೇಶ್ ಕುಮಾರ್ ಚಾಲನೆ ನೀಡಿದರು.
ವಿಜ್ಞಾನ ಎಂದರೇನು? ಇಸ್ರೋ ಎಂದರೇನು? ಉಪಗ್ರಹದ ಕಾರ್ಯಗಳೇನು? ರಾಕೆಟ್ನ ಕಾರ್ಯಗಳ ಬಗ್ಗೆ ಅರಿವು ಮೂಡಿಸಲಾಯಿತು.
ವಿಶ್ವ ಅಂತರಿಕ್ಷ ಸಪ್ತಾಹ 2019 ಸ್ಪೇಸ್ ರಿಕವರಿ ಎಕ್ಸಿಪಿರಿಮೆಂಟ್, ಪಿಎಸ್ಎಲ್ವಿ, ಜಿಎಸ್ಎಲ್ವಿ ರಾಕೆಟ್ಗಳ ಪ್ರಾತ್ಯಕ್ಷಿಕೆಯನ್ನು ಈ ವಸ್ತು ಪ್ರದರ್ಶನದಲ್ಲಿ ಇಡಲಾಗಿತ್ತು. ಗಗನಯಾತ್ರಿಗಳು ಹೇಗೆ ಬಾಹ್ಯಾಕಾಶಕ್ಕೆ ಹೋಗುತ್ತಾರೆ, ಅಲ್ಲಿನ ಕಾರ್ಯಗಳ ಬಗ್ಗೆ ತಿಳಿಸಿಕೊಡಲಾಯಿತು.
ವಿವಿಧ ಶಾಲೆಯ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದೇಶದ ಪ್ರತಿಷ್ಠಿತ ಸಂಸ್ಥೆಯಾದ ಇಸ್ರೋ ಸಂಸ್ಥೆಯ ವತಿಯಿಂದ ಬಾಹ್ಯಾಕಾಶ, ಚಂದ್ರಯಾನ, ನಕ್ಷತ್ರಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಕುತೂಹಲ ಮತ್ತು ಆಸಕ್ತಿ ಹೆಚ್ಚಿಸಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಆರ್ ಕಾಮಾಕ್ಷಿ ಅಭಿಪ್ರಾಯಪಟ್ಟರು.
ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮಗಳನ್ನು ನಡೆಸಲಾಯಿತು, ಜೊತೆಗೆ ಸ್ವಚ್ಛ ಭಾರತದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.