ತುಮಕೂರು: ಜಿಲ್ಲೆಯ ಸಿದ್ಧಗಂಗಾ ಮಠಕ್ಕೂ ನೀರಿನ ಅಭಾವ ಎದುರಾಗುವ ಸಾಧ್ಯತೆಗಳಿವೆ. ಮಠಕ್ಕೆ ನೀರು ಪೂರೈಸುವ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ.
ಕಳೆದ ವರ್ಷಕ್ಕೆ ಹೋಲಿಸಿದ್ರೆ ಬಿಸಿಲು ಜೋರಾಗಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗುವ ಆತಂಕ ಮೂಡಿದೆ. ಜಿಲ್ಲೆಯ ಸಿದ್ಧಗಂಗಾ ಮಠಕ್ಕೂ ಕೂಡ ನೀರಿನ ಅಭಾವ ಎದುರಾಗುವ ಸಾಧ್ಯತೆಗಳಿದೆ. ಏಪ್ರಿಲ್ ತಿಂಗಳ ಅರ್ಧದಿಂದ ಕುಡಿಯುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ, ನೀರನ್ನು ಮಿತವಾಗಿ ಬಳಸುವಂತೆ ಮಠದ ವಿದ್ಯಾರ್ಥಿಗಳಿಗೆ ಸ್ವಾಮೀಜಿ ಸೂಚಿಸಿದ್ದಾರೆ.
ಮಠಕ್ಕೆ ನೀರು ಪೂರೈಸುವ ಯೋಜನೆ ಇನ್ನೂ ಪೂರ್ಣಗೊಳ್ಳದಿರುವ ಪರಿಣಾಮ ಮಠದಲ್ಲಿ ನೀರಿನ ಸಮಸ್ಯೆ ಎದುರಿಸುವಂತಹ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರುತ್ತಿದೆ. ಕೆರೆ, ಕಟ್ಟೆಗಳಲ್ಲಿ ನೀರು ಬರಿದಾಗುತ್ತಿದೆ. ಅಂತರ್ಜಲ ಪ್ರಮಾಣ ಕ್ಷೀಣಿಸುತ್ತಿದೆ. ಸದ್ಯ ಪಾಲಿಕೆಯಿಂದ ಸಿದ್ಧಗಂಗಾ ಮಠಕ್ಕೆ ನೀರು ಪೂರೈಕೆಯಾಗುತ್ತಿದ್ದರೂ ಏಪ್ರಿಲ್ ಮಧ್ಯಭಾಗದಿಂದ ನೀರಿನ ಕೊರತೆ ಉಂಟಾಗುವ ಕಳವಳ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿಗಳದ್ದಾಗಿದೆ.
ಹಾಗಾಗಿ, ನೀರನ್ನು ಮಿತವಾಗಿ ಬಳಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಮಠದ ನಾಲ್ಕು ಬೋರ್ವೆಲ್ ನೀರಿನ ಪ್ರಮಾಣ ದಿನೇದಿನೆ ಕಡಿಮೆಯಾಗುತ್ತಿದೆ. ಪರಿಣಾಮ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುವ ಪರಿಸ್ಥಿತಿ ಎದುರಾಗಲಿದೆ ಅಂತಾರೆ ಶ್ರೀಗಳು.