ತುಮಕೂರು: ಜಿಲ್ಲೆಯು ಕಳೆದ ವರ್ಷ ಚಿರತೆ ದಾಳಿಯಿಂದ ಸಾಕಷ್ಟು ಚರ್ಚೆಯಲ್ಲಿತ್ತು. ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಚಿರತೆ ಮತ್ತು ಮಾನವ ಸಂಘರ್ಷ ಏರ್ಪಟ್ಟಿತ್ತು. ಚಿರತೆ ದಾಳಿಯಿಂದ ಸಾಕಷ್ಟು ಜಾನುವಾರು ಸೇರಿದಂತೆ ಅನೇಕ ಸಾಕು ಪ್ರಾಣಿಗಳು ಬಲಿಯಾಗಿ ಜನರು ಭೀತಿಯಲ್ಲಿ ಕಾಲ ಕಳೆಯುವಂತಾಗಿತ್ತು. ಹಾಗಾಗಿ ಅರಣ್ಯ ಇಲಾಖೆ ಅಲ್ಲಲ್ಲಿ ಬೋನುಗಳನ್ನು ಇರಿಸಿ ಚಿರತೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡುವ ಕಾರ್ಯ ನಡೆಸುತ್ತಿದೆ.
ಇತ್ತೀಚೆಗೆ ಕುಣಿಗಲ್ ಹಾಗೂ ತುಮಕೂರು ತಾಲೂಕು ವ್ಯಾಪ್ತಿಯಲ್ಲಿ ಜನರಿಗೆ ಉಪಟಳ ನೀಡುತ್ತಿದ್ದ ಎರಡು ಚಿರತೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಲಾಗಿದೆ.
ಕಳೆದ ವರ್ಷ ಜನರ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಾಕಷ್ಟು ಹರಸಾಹಸ ಪಟ್ಟಿತ್ತು. ಕೊನೆಗೆ ಸಿಸಿ ಕ್ಯಾಮೆರಾ ಸೇರಿದಂತೆ ಬೃಹತ್ ಬೋನ್‌ಗಳನ್ನು ನಿರ್ಮಿಸಿ ನರಭಕ್ಷಕ ಚಿರತೆಯನ್ನು ಸೆರೆಹಿಡಿಯುವುದರ ಮೂಲಕ ಚಿರತೆ ಸೆರೆಯಿಡಿಯುವ ಕಾರ್ಯವನ್ನು ಸಮರ್ಥವಾಗಿ ನಿರ್ವಹಣೆ ಮಾಡಲಾಗಿತ್ತು. ಆದರೆ, ಇದೀಗ ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿಯ ಹುಲಿವಾಹನ ಹಾಗೂ ಮನವಳ್ಳಿ ಗ್ರಾಮದಲ್ಲಿ ಮತ್ತೆ ಚಿರತೆಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.