ತುಮಕೂರು:ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು ಇಂದಿರಾ ಕ್ಯಾಂಟೀನ್. ತುಮಕೂರು ನಗರದಲ್ಲಿ ನಾಲ್ಕು ಇಂದಿರಾ ಕ್ಯಾಂಟೀನ್ ಘಟಕಗಳಿವೆ. ಇಲ್ಲಿನ ಸಿಬ್ಬಂದಿಗೆ ವೇತನ ಸಿಕ್ಕಿಲ್ಲ. ಹೀಗಾಗಿ ಕೆಲಸ ಸ್ಥಗಿತಗೊಳಿಸಿದ್ದಾರೆ. ಬಡವರು ಹಾಗೂ ವಿದ್ಯಾರ್ಥಿಗಳ ಹೊಟ್ಟೆ ತುಂಬಿಸುತ್ತಿದ್ದ ಕ್ಯಾಂಟಿನ್ಗಳು ಬಂದ್ ಆಗಿದ್ದರಿಂದ ಹಸಿವಿನಿಂದ ಕ್ಯಾಂಟಿನ್ಗೆ ಬಂದ ಜನರು ಊಟ ಸಿಗದೆ ನಿರಾಶರಾಗಿ ವಾಪಸ್ ತೆರಳಿದ್ದಾರೆ.
ನಗರದ ಇಂದಿರಾ ಕ್ಯಾಂಟಿನ್ಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಿಬ್ಬಂದಿಗೆ ಕಳೆದ 8 ತಿಂಗಳಿನಿಂದ ಸಂಬಳವನ್ನೇ ನೀಡಿಲ್ಲ. ಹೀಗಾಗಿ ಇಂದು ಬೆಳಗ್ಗೆ ಸಿದ್ದಪಡಿಸಿದ ರೈಸ್ ಬಾತ್, ಇಡ್ಲಿ, ಚಟ್ನಿ ಎಲ್ಲವನ್ನೂ ಅಡುಗೆ ಮನೆಯಲ್ಲಿಯೇ ಉಳಿಸಿ, ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದರು. ಕ್ಯಾತಸಂದ್ರ, ಶಿರಾಗೇಟ್, ಮಂಡಿಪೇಟೆ ಹಾಗೂ ಪಾಲಿಕೆ ಆವರಣ ಸೇರಿದಂತೆ ನಗರದ ನಾಲ್ಕು ಕಡೆಗಳಲ್ಲಿ ಕ್ಯಾಂಟಿನ್ ಕಾರ್ಯನಿರ್ವಹಿಸುತ್ತಿದೆ. ಇವುಗಳ ಉಸ್ತುವಾರಿಯನ್ನು ರಿವಾರ್ಡ್ಸ್ ಎಂಬ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಕ್ಯಾಂಟಿನ್‌ನಲ್ಲಿ ಊಟ ತಯಾರಿಸುವುದರಿಂದ ಹಿಡಿದು, ಅಲ್ಲಿನ ಸಿಬ್ಬಂದಿಗೆ ಸಂಬಳ ನೀಡುವುದು ಸೇರಿ ಎಲ್ಲವನ್ನೂ ರಿವಾರ್ಡ್ ಸಂಸ್ಥೆಗೆ ಹೊರಗುತ್ತಿಗೆ ನೀಡಲಾಗಿದೆ.
ಆದರೆ ಕಂಪನಿಗೂ ಸರ್ಕಾರ ಬಿಲ್ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಕಂಪನಿಯವರು ಸಿಬ್ಬಂದಿಗೆ ಸಂಬಳ ನಿಲ್ಲಿಸಿದ್ದಾರೆ ಎಂದು ಕ್ಯಾಂಟೀನ್ ವ್ಯವಸ್ಥಾಪಕ ಮಂಜುನಾಥ ತಿಳಿಸಿದರು. ಏತನ್ಮಧ್ಯೆ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದು ಪಾಲಿಕೆ ಅಧಿಕಾರಿಗಳು ಬೇರೆ ಸಿಬ್ಬಂದಿಯನ್ನು ಕರೆಸಿಕೊಂಡು ಇಂದಿರಾ ಕ್ಯಾಂಟಿನ್ ಮುಂದುವರೆಸುವ ಕಸರತ್ತು ನಡೆಸಿದ್ದಾರೆ. ಆದರೆ ಇದಕ್ಕೆ ಅಲ್ಲಿನ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಳಗ್ಗಿನ ಜಾವ ಮಾಡಿದ ಉಪ್ಪಿಟ್ಟು, ಇಡ್ಲಿಯನ್ನು ಮಧ್ಯಾಹ್ನ ಜನರಿಗೆ ನೀಡಲಾಗಿದೆ. ಜೊತೆಗೆ ಸಂಬಳ ಕೇಳಿದ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡುವ ಬೆದರಿಕೆಯನ್ನು ಅಧಿಕಾರಿಗಳು ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡುವೆ ಹಗ್ಗಾಜಗ್ಗಾಟ ಮುಂದುವರೆದಿದೆ.
ಕಲಬುರಗಿಯಲ್ಲೂ ತೆರೆಯದ ಕ್ಯಾಂಟೀನ್:ಈ ಹಿಂದೆ ಉಳಿಸಿಕೊಂಡಿದ್ದ ಬಾಕಿ ಬಿಲ್ನಿಂದ ನಗರದಲ್ಲಿರುವ 7 ಇಂದಿರಾ ಕ್ಯಾಂಟೀನ್ಗಳು ಇನ್ನೂ ತೆರೆದಿಲ್ಲ. ಮತ್ತೊಂದೆಡೆ, ಕ್ಯಾಂಟೀನ್ ನಡೆಸಲು ಸಾಲ ಮಾಡಿಕೊಂಡಿದ್ದ ಏಜೆನ್ಸಿ ಮತ್ತು ನೌಕರರು ಬಾಕಿ ಬಿಲ್ಗಾಗಿ ಪರದಾಡುತ್ತಿದ್ದಾರೆ. ಹೀಗಾಗಿ ಬಾಕಿ 7 ಕೋಟಿ 30 ಲಕ್ಷ ರೂ ಬಿಲ್ ಪಾವತಿ ಮಾಡುವಂತೆ ಸರ್ಕಾರಕ್ಕೆ ನೌಕರರು ಒತ್ತಾಯಿಸಿದ್ದರು. ನೂತನ ಸರ್ಕಾರ ಬಂದ ಮೇಲೆ ರಾಜ್ಯದ ಬಹುತೇಕ ಕಡೆ ಕ್ಯಾಂಟೀನ್ನಲ್ಲಿ ಗುಣಮಟ್ಟದ ಹಾಗೂ ತರಹೇವಾರಿ ಆಹಾರದ ಮೆನ್ಯೂ ಮಾಡಲಾಗಿದೆ. ಆದರೆ ಕಲಬುರಗಿ ನಗರದಲ್ಲಿ ಮಾತ್ರ ಏಳು ಇಂದಿರಾ ಕ್ಯಾಂಟೀನ್ಗಳು ಕಳೆದ ಒಂಭತ್ತು ತಿಂಗಳಿನಿಂದ ಬಾಗಿಲು ಹಾಕಿಕೊಂಡಿವೆ. ಪಾಲಿಕೆ ಹಾಗೂ ಸರ್ಕಾರದಿಂದ ಸುಮಾರು ಏಳು ಕೋಟಿಗೂ ಅಧಿಕ ಹಣ ಬಾಕಿಯಿರುವ ಹಿನ್ನೆಲೆಯಲ್ಲಿ ಸರಿಯಾಗಿ ನಿರ್ವಹಣೆ ಮಾಡಲಾಗದೆ ಟೆಂಡರ್ ಪಡೆದವರೂ ಕ್ಯಾಂಟೀನ್ ಬಂದ್ ಮಾಡಿದ್ದಾರೆ.
ಇದನ್ನೂ ಓದಿ:188 ಹೊಸ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಸಂಪುಟ ತೀರ್ಮಾನ: ಆಯಾ ಭಾಗದ ಸ್ಥಳೀಯ ಆಹಾರಕ್ಕೆ ಆದ್ಯತೆ