ತುಮಕೂರು: ಸ್ಮಾರ್ಟ್ ಸಿಟಿ ಹಾಗೂ ಹಲವು ಯೋಜನೆಗಳ ಹೆಸರಿನಲ್ಲಿ ನಗರದಲ್ಲಿ ರಸ್ತೆಗಳನ್ನು ಅಗೆದಿದ್ದು, ಚರಂಡಿಗಳನ್ನು ಸರಿಯಾಗಿ ನಿರ್ಮಾಣ ಮಾಡದೇ ಇರುವುದರಿಂದ ಕೆಲ ಭಾಗಗಳಲ್ಲಿ ರಸ್ತೆಗಳು ಕೆಸರು ಗುಂಡಿಯಾಗಿವೆ.
ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಗಾಜಿನ ಮನೆಯ ಪಕ್ಕದ ರಸ್ತೆಯು ಮಳೆ ನೀರಿನಿಂದ ತುಂಬಿ ಹೋಗಿದೆ. ಇದರ ಜೊತೆಗೆ ಕಳೆದ ಒಂದೇರಡು ತಿಂಗಳಿನಿಂದ ರಸ್ತೆ ರಿಪೇರಿ ಮಾಡಲಾಗುತ್ತಿದೆ. ಇದು ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ವಾಹನ ಸವಾರರಿಗೆ ಪ್ರತಿದಿನ ತೊಂದರೆಯಾಗುತ್ತಿದೆ.
ದಿನಕ್ಕೆ ಒಂದಲ್ಲ ಎರಡು ಅಪಘಾತಗಳು ಸಂಭವಿಸುತ್ತಲೇ ಇದ್ದು, ಸ್ಥಳೀಯ ನಿವಾಸಿ ರಾಜು ಮಾತನಾಡಿ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುವ ಅಧಿಕಾರಿಗಳು ಯಾವುದೇ ರೀತಿಯಲ್ಲಿಯೂ ಜನರಿಗೆ ಉಪಯೋಗವಾಗುವಂತಹ ಕಾರ್ಯಗಳನ್ನು ಮಾಡುತ್ತಿಲ್ಲ, ಇದರಿಂದಾಗಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುವುದರ ಜೊತೆಗೆ ಅಪಘಾತಗಳು ಸಂಭವಿಸುತ್ತಿವೆ ಎಂದು ಅಧಿಕಾರಿಗಳ ವಿರುದ್ಧ ದೂರಿದರು.
ಮಳೆ ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯದೆ ಇರುವುದೇ ತೊಂದರೆಗಳಿಗೆ ಮುಖ್ಯ ಕಾರಣವಾಗಿದೆ. ಈ ಪ್ರದೇಶವಲ್ಲದೆ ಸತ್ಯಮಂಗಲ ರಸ್ತೆ, ಯಲ್ಲಾಪುರ ರಸ್ತೆ, ಶಿರಾಗೇಟ್, ಅರಳಿಮರದ ಪಾಳ್ಯ ಇನ್ನೂ ಹಲವು ಭಾಗಗಳಲ್ಲಿ ಇದೇ ರೀತಿ ಸಮಸ್ಯೆ ಉಂಟಾಗಿದೆ. ಇನ್ನು ನೀರು ನಿಂತಲ್ಲೇ ನಿಂತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮೊದಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.