ತುಮಕೂರು:ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದ ಅತ್ತೆಯನ್ನೇ ಕೊಲೆ ಮಾಡಿದ್ದ ಮಹಿಳೆ ಸೇರಿ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಶಿರಾ ತಾಲೂಕು ಗೌಡಗೆರೆ ಹೋಬಳಿ ಉಜ್ಜನಕುಂಟೆ ಗ್ರಾಮದ ಸುಧಾಮಣಿ ಮತ್ತು ಆಕೆಯ ಪ್ರಿಯಕರ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಜವಗೊಂಡನಹಳ್ಳಿ ಹೋಬಳಿಯ ಎಳನೀರು ವ್ಯಾಪಾರಿ ಶ್ರೀರಂಗಪ್ಪ ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ.
ಜೂನ್ 24ರಂದು ತಾವರೆಕೆರೆ ಪೊಲೀಸ್ ಠಾಣೆ ವ್ಯಾಫ್ತಿಯ ಉಜ್ಜನಕುಂಟೆ ಗ್ರಾಮದಲ್ಲಿ ಸರೋಜಮ್ಮ(65) ಎಂಬ ಮಹಿಳೆ ತನ್ನ ವಾಸದ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುವ ಕುರಿತು ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತಾವರೆಕೆರೆ ಪಿಎಸ್ಐ ಪಾಲಾಕ್ಷಪ್ರಭು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ತನಿಖೆ ವೇಳೆ ಪೊಲೀಸರಿಗೆ ಘಟನೆಯ ಕುರಿತು ಸಾಕಷ್ಟು ಅನುಮಾನ ಮೂಡಿತ್ತು.
ಇದನ್ನೂ ಓದಿ: ವಸತಿ ಗೃಹದಲ್ಲಿ ಸಿಕ್ಕಿಬಿದ್ದ ಜೋಡಿ ಪ್ರಕರಣ : ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲು
ಅಲ್ಲದೇ ಇದು ಆಕಸ್ಮಿಕ ಘಟನೆಯಾಗಿಲ್ಲ ಎಂಬುದು ಮೇಲ್ನೋಟಕ್ಕೆ ಅರಿವಿಗೆ ಬಂದಿತ್ತು. ಇದಕ್ಕೆ ಪೂರಕವಾಗಿ ಮೃತ ಸರೋಜಮ್ಮಳ ಅಳಿಯ ಪ್ರೇಮ್ಕುಮಾರ್ ಪೊಲೀಸರಿಗೆ ಕೆಲವು ಮಾಹಿತಿ ನೀಡಿದ್ದರು. ಅದರಲಿ ಸೊಸೆ ಸುಧಾರಾಣಿ ಮೇಲೆ ಅನುಮಾನ ವ್ಯಕ್ತಪಡಿಸಲಾಗಿತ್ತು.
ಪ್ರೇಮ್ಕುಮಾರ್ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಸೊಸೆ ಸುಧಾರಣಿಯು ಶ್ರೀರಂಗಪ್ಪ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಇದೇ ವಿಚಾರದಲ್ಲಿ ಸರೋಜಮ್ಮ ತನ್ನ ಸೊಸೆಯೊಂದಿಗೆ ಜಗಳ ಮಾಡಿ ವಿರೋಧ ವ್ಯಕ್ತಪಡಿಸಿದ್ದಳು. ಇದರಿಂದ ಕೋಪಗೊಂಡ ಸುಧಾಮಣಿ ತನ್ನ ಅತ್ತೆಯನ್ನೇ ಬೆಂಕಿ ಹಚ್ಚಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದರು.
ಜೂನ್ 26ರಂದೇ ಸುಧಾಮಣಿ ಮತ್ತು ಶ್ರೀರಂಗಪ್ಪನನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ಆರೋಪಿ ಸುಧಾಮಣಿಯು ತನ್ನ ಪ್ರಿಯಕರ ಶ್ರೀರಂಗಪ್ಪನೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದರಿಂದ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅತ್ತೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದಳು. ಅದರಂತೆ ಪ್ರಿಯಕರ ಶ್ರೀರಂಗಪ್ಪನು ಸರೋಜಮ್ಮಳನ್ನು ಸುಟ್ಟು ಹಾಕಲು ಪೆಟ್ರೋಲ್ ತಂದುಕೊಟ್ಟಿದ್ದನು.
ಇಬ್ಬರ ಕುತಂತ್ರದಂತೆ ಅತ್ತೆ ಸರೋಜಮ್ಮರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಳು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇಬ್ಬರನ್ನು ಬಂಧಿಸಿರುವ ಪೊಲೀಸರು ಈಗ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.