ತುಮಕೂರು :ಮೂರು ಡಿಸಿಎಂ ಸ್ಥಾನಗಳನ್ನು ಸೃಷ್ಟಿ ಮಾಡಿದರೆ ಎಲ್ಲಾ ಸಮುದಾಯಗಳು ನಮಗೆ ಬೆಂಬಲ ನೀಡಲು ಅನುಕೂಲ ಆಗುತ್ತದೆ. ಪರಿಶಿಷ್ಟ ಜಾತಿ-ಪಂಗಡ, ಅಲ್ಪಸಂಖ್ಯಾತರಿಗೆ, ವೀರಶೈವ ಸಮುದಾಯಗಳಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಸೃಷ್ಟಿ ಮಾಡಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ಗೆ ಪತ್ರ ಬರೆಯುತ್ತೇನೆ ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ತಿಳಿಸಿದ್ದಾರೆ.
ನಗರದಲ್ಲಿಂದು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳ ಮೊದಲ ವಾರದಲ್ಲಿ ಹೈಕಮಾಂಡ್ ಮುಖಂಡರನ್ನು ಭೇಟಿ ಮಾಡುತ್ತೇನೆ. ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಹೈಕಮಾಂಡ್ ನಿರ್ಣಯ ಮಾಡಬೇಕು. ಹೈಕಮಾಂಡ್ ತೀರ್ಮಾನವೇ ನಮ್ಮೆಲ್ಲರ ತೀರ್ಮಾನ. ಪಕ್ಷದ ಹಿತದೃಷ್ಟಿಯಿಂದ ಇದು ಒಳ್ಳೆಯದು. ಈ ಹೇಳಿಕೆಗೆ ಯಾರು ಸಹಮತ ನೀಡುತ್ತಾರೋ ಅವರನ್ನೆಲ್ಲ ಕರೆದುಕೊಂಡು ಹೋಗ್ತೀನಿ. ಈ ಬಗ್ಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಅಸಮಾಧಾನವೇನಿಲ್ಲ. ನಾನು ಡಿಕೆ ಬ್ರದರ್ಸ್ ವಿರುದ್ಧ ಹೇಳಿಲ್ಲ. ಡಿಕೆ ಶಿವಕುಮಾರ್ ಕೂಡ ಉಪಮುಖ್ಯಮಂತ್ರಿ ಇದ್ದಾರೆ. ಅವರು ನಮ್ಮ ಪಕ್ಷದ ಅಧ್ಯಕ್ಷರಾಗಿದ್ದಾರೆ. ಪಕ್ಷ ಸಂಘಟನೆ ಬಗ್ಗೆ ಚಾಣಾಕ್ಷ್ಯರಿದ್ದಾರೆ. ಅವರು ಅಸಮಾಧಾನಗೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿಲ್ಲ ಎಂದು ಹೇಳಿದರು.
ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಬಗ್ಗೆ ಚರ್ಚೆ ಆಗಿಲ್ಲ. ಹಾಸನದಲ್ಲಿ ಯಾರನ್ನು ಅಭ್ಯರ್ಥಿ ಮಾಡಿದ್ರೆ ಒಳ್ಳೆಯದು ಎಂದು ವೈಯಕ್ತಿಕವಾಗಿ ಎಲ್ಲರ ಜೊತೆಗೆ ಚರ್ಚೆ ಮಾಡುತ್ತಿದ್ದೇನೆ. ಎಲ್ಲರ ಅಭಿಪ್ರಾಯ ಪಡೆಯುತ್ತಿದ್ದೇನೆ. ಎಲ್ಲರೂ ಈ ಬಗ್ಗೆ ಪಕ್ಷಕ್ಕೆ ಸಲಹೆಗಳನ್ನು ನೀಡುತ್ತೇವೆ. ಅದರ ಮೇಲೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಜೆಡಿಎಸ್- ಬಿಜೆಪಿ ಮೈತ್ರಿ ಅಂತಿಮವಾಗಿಲ್ಲ ಎಂದು ನಿನ್ನೆ ಯಡಿಯೂರಪ್ಪ ಹೇಳಿದ್ದಾರೆ ಎಂದರು.