ತುಮಕೂರು:ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಸಂಭವನೀಯ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಕೂಡ ನಾನು ಕೆಲಸ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಅಧಿಕೃತವಾಗಿ ಬಿಜೆಪಿ ಹೈಕಮಾಂಡ್ ಈವರೆಗೆ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿಲ್ಲ. ಆದ್ರೆ ಡಾ. ರಾಜೇಶ್ ಗೌಡ ಮಾತ್ರ ನಿರಂತರವಾಗಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮೂಲ ಬಿಜೆಪಿ ಕಾರ್ಯಕರ್ತರನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ಬಿಜೆಪಿಯಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ ಎಂದು ಸಂಭವನೀಯ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ತಿಳಿಸಿದ್ದಾರೆ.
ಶಿರಾ ಉಪಕದನ ಚುನಾವಣಾ ಪ್ರಚಾರ ಈಗಾಗಲೇ ಬಿಜೆಪಿ ಟಿಕೆಟ್ಗಾಗಿ ಸಾಕಷ್ಟು ಪ್ರಯತ್ನ ಪಟ್ಟಿರುವ ಗೌಡ ಹಾಗೂ ಬಿ.ಕೆ.ಮಂಜುನಾಥ ಅವರೊಂದಿಗೆ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಒಟ್ಟಾಗಿ ಭಾಗವಹಿಸಿದ್ದೇನೆ. ಯಾವುದೇ ರೀತಿಯ ಗೊಂದಲವಿಲ್ಲ ಎಂದಿದ್ದಾರೆ. ಪಕ್ಷವು ಯಾರನ್ನೇ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರೂ ಸಹ ಅವರ ಪರವಾಗಿ ಕೆಲಸ ಮಾಡುತ್ತೇನೆ. ಬಿಜೆಪಿ ಸೇರುವ ತನಕ ನಾನು ಯಾವುದೇ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದಿರಲಿಲ್ಲ. ಪ್ರಥಮ ಬಾರಿಗೆ ರಾಜಕೀಯ ಪಕ್ಷವೊಂದರ ಸದಸ್ಯತ್ವ ಪಡೆದಿರುವುದು ಎಂದರೆ ಅದು ಬಿಜೆಪಿ ಮಾತ್ರ. ನಾನೆಂದೂ ಕೂಡ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಹೆಚ್.ಡಿ.ದೇವೇಗೌಡರ ಬಳಿ ಹೋಗಿ ಟಿಕೆಟ್ ಕೊಡಿ ಎಂದು ವಿನಂತಿ ಮಾಡಿಕೊಂಡಿಲ್ಲ ಅಥವಾ ಯಾವುದೇ ಕಾಂಗ್ರೆಸ್ ಮುಖಂಡರ ಬಳಿ ಹೋಗಿ ಟಿಕೆಟ್ ಕೊಡಿ ಎಂದು ಕೇಳಿಲ್ಲ ಎಂದರು.
ಕಾಂಗ್ರೆಸ್ ಮುಖಂಡರು ನನ್ನ ಹೆಸರನ್ನು ಪ್ರಸ್ತಾಪ ಮಾಡಿರುವುದು ಅವರ ವೈಯಕ್ತಿಕ ವಿಚಾರವಾಗಿದೆ. ಅದರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಸಿದ್ದರಾಮಯ್ಯ ಅವರ ಮಗ ಯತೀಂದ್ರ ಹಾಗೂ ನಾನು ಸ್ನೇಹಿತರಿರಬಹುದು. ಆದರೆ ರಾಜಕಾರಣವೇ ಬೇರೆ ಸ್ನೇಹವೇ ಬೇರೆ. ನಾನು ಬಿಜೆಪಿಗೆ ಸಿದ್ಧಾಂತ ಒಪ್ಪಿ ಪಕ್ಷ ಸೇರಿದ್ದೇನೆಯೇ ಹೊರತು ಯಾರೂ ಕೂಡ ನನಗೆ ಒತ್ತಾಯ ಮಾಡಿ ಇಲ್ಲಿಗೆ ಕಳುಹಿಸಿಕೊಟ್ಟಿಲ್ಲ ಎಂದಿದ್ದಾರೆ.