ತುಮಕೂರು:ನರೇಂದ್ರ ಮೋದಿ ಅವರಿಗೆ ನಾನು ಏನು ಎಂದು ತೋರಿಸುತ್ತೇನೆಂದು ಮಾಜಿ ಪ್ರಧಾನಿ ಗುಡುಗಿದ್ದಾರೆ. ತುಮಕೂರು ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಹೆಚ್ಡಿಡಿ ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ನಡೆದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಜಂಟಿ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.
ನನಗೂ ರಾಜಕಾರಣ ಗೊತ್ತಿದೆ. ಈ ರಾಜ್ಯದಲ್ಲಿ ನಾವು ಒಟ್ಟಾಗಿ ಇರುವುದು ನೋಡಿ ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ರಾಜ್ಯದಲ್ಲಿ ರಾಹುಲ್ ಗಾಂಧಿಯನ್ನು ಒಕ್ಕಲಿಗರು ಗೆಲ್ಲಿಸುವುದಿಲ್ಲ. ಹಾಗಾಗಿ ರಾಜ್ಯಕ್ಕೆ ಬರಲಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಈ ಹಿಂದೆ ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಅವರನ್ನು ಒಕ್ಕಲಿಗರು ಗೆಲ್ಲಿಸಲಿಲ್ಲವೇ ಎಂದರು. ಸೋನಿಯಾ ಗಾಂಧಿಯನ್ನು ಕೂಡ ಬಳ್ಳಾರಿಯಲ್ಲಿ ರಾಜ್ಯದ ಮತದಾರರು ಗೆಲ್ಲಿಸಲಿಲ್ಲವೆ ಎಂದಿರುವ ಹೆಚ್ಡಿಡಿ, ನಮಗೂ ಕೂಡ ಕೈ ಕಾಲು ಆಡಿಸಿ ಮಾತನಾಡಲಿಕ್ಕೆ ಬರುತ್ತದೆ ಎಂದು ಮೋದಿ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.
ಉಪ್ಪಾರ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಭರವಸೆ:
ಉಪ್ಪಾರ ಸಮುದಾಯಕ್ಕೆ ಕೇಂದ್ರದಲ್ಲಿ ಎಸ್ಟಿ ಸಮುದಾಯದ ಮೀಸಲಾತಿಯನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಶ್ರಮ ವಹಿಸುತ್ತೇನೆಂದು ಮಾಜಿ ಪ್ರಧಾನಿ ಭರವಸೆ ನೀಡಿದರು. ತಿಪಟೂರಿನಲ್ಲಿ ನಡೆದ ಉಪ್ಪಾರ ಸಮುದಾಯದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ, ಅದು ದೈವ ಇಚ್ಛೆಯಾಗಿದೆ. ನಿನ್ನೆ ಪ್ರಧಾನಿ ಮೋದಿ ರಾಜ್ಯದಲ್ಲಿ ಪ್ರಚಾರ ನಡೆಸಿ ಹೋಗಿದ್ದಾರೆ. ಆದರೆ ಅವರು ಮಾತನಾಡಿರುವ ವೈಖರಿ ಮಾತ್ರ ಪ್ರಧಾನಿ ಸ್ಥಾನಕ್ಕೆ ಪೂರಕವಾದುದಲ್ಲ, ಬದಲಾಗಿ ಒಂದು ರೀತಿಯ ಧಕ್ಕೆ ತರುವಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.