ತುಮಕೂರು : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಪ್ರಕರಣದ ಕುರಿತು ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅದು ಒಳ್ಳೆಯದಲ್ವಾ? ನಾವು ಅದನ್ನೇ ಬಯಸಿದ್ದೆವು. ಈ ಹಿಂದಿನ ಬಿಜೆಪಿ ಸರ್ಕಾರ ತಪ್ಪು ಮಾಡಿತ್ತು. ಸ್ಪೀಕರ್ ಅನುಮತಿ ಇಲ್ಲದೇ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದರು ಅಂತ ಕೇಸ್ ವಾಪಸ್ ಪಡೆದಿದ್ದೆವು. ಸದ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ಗೆ ಕಮ್ಯುನಿಕೇಟ್ ಮಾಡಲಾಗಿದೆ ಎಂದರು.
ನಗರದ ಅಗಳಕೋಟೆಯ ಸಾಹೇ (ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್)ನ 12ನೇ ಘಟಿಕೋತ್ಸವವು ಶಿಕ್ಷಣ ಭೀಷ್ಮ ಡಾ.ಎಚ್.ಎಮ್.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಲೋಕಸಭಾ ಸದಸ್ಯ ಡಾ. ಶಶಿ ತರೂರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಆಚಾರ್ಯ ವಿನೋಭಾ ಭಾವೆ ಅವರ ಭೂದಾನ ಚಳವಳಿ ಸಂದರ್ಭದಲ್ಲಿ ಪ್ರೇರಿತರಾದ ಶಿಕ್ಷಣ ಭೀಷ್ಮ ಡಾ.ಹೆಚ್.ಎಂ ಗಂಗಾಧರಯ್ಯ ಕಟ್ಟಿದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಅವರ ಮಕ್ಕಳ ಆಸಕ್ತಿಯ ಫಲವಾಗಿ ಇಂದು ಬೃಹದಾಕಾರವಾಗಿ ಬೆಳೆದಿದ್ದು, ಜಾಗತಿಕವಾಗಿ ಗುರುತಿಸಿಕೊಂಡಿದೆ. ರಾಜ್ಯದ ಹಿಂದುಳಿದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ದೊರೆಯಬೇಕೆಂಬ ಆಶಯದೊಂದಿಗೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಹುಟ್ಟಿಕೊಂಡಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರೋತ್ತರ ಭಾರತಕ್ಕಾಗಿ ಶ್ರಮಿಸಿದ ಮಹಾತ್ಮ ಗಾಂಧೀಜಿ, ಜವಹರಲಾಲ್ ನೆಹರು, ಮುಂತಾದವರನ್ನು ಸ್ಮರಿಸಿದರು. ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದವರಿಗೂ ಕೈಗೆಟುಕುವ ಶುಲ್ಕದಲ್ಲಿ ಶಿಕ್ಷಣ ನೀಡುತ್ತಿರುವುದು ಸಂಸ್ಥೆಯ ಹೆಗ್ಗಳಿಕೆ. ಹೆಸರಾಂತ ಆಸ್ಪತ್ರೆಗಳಲ್ಲಿ ಸಾಧ್ಯವಿಲ್ಲ ಎಂದು ಘೋಷಿಸಿದ ಶಸ್ತ್ರಚಿಕಿತ್ಸೆಗಳನ್ನೂ ಸಹ ಶ್ರೀ ಸಿದ್ಧಾರ್ಥ ಆಸ್ಪತ್ರೆಯ ವೈದ್ಯರು ನಿರ್ವಹಿಸಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿರುವುದನ್ನು ಶ್ಲಾಘಿಸಿದರು.
1000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮತ್ತು ರ‍್ಯಾಂಕ್ ಪಡೆದ 50 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಪಿಹೆಚ್ಡಿ ಪದವಿ ಪಡೆದ ಎಲ್ಲಾ ಅಭ್ಯರ್ಥಿಗಳನ್ನು ಅಭಿನಂದಿಸಿದರು. ಕೋವಿಡ್‌ನಿಂದ ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಇಂದೂ ಸಹ ಈ ಕ್ಷೇತ್ರ ತೆವಳುತ್ತಾ ಸಾಗುತ್ತಿದೆ. ಪರಿಶ್ರಮ, ಬದ್ಧತೆ, ಮತ್ತು ಶಿಸ್ತಿನಿಂದ ಇಂದು ನೀವು ಪದವಿ ಪಡೆದಿದ್ದೀರಿ, ಮುಂದೆ ಇದು ಸಮಾಜದದಲ್ಲಿ ಮೇಲೆ ಪ್ರತಿಫಲಗೊಳ್ಳಲಿದೆ ಎಂದು ಶಶಿ ತರೂರ್ ನುಡಿದರು.