ತುಮಕೂರು: ಗ್ರಾಮಾಂತರ ಕ್ಷೇತ್ರದಲ್ಲಿ ಈ ಹಿಂದೆ ಶಾಸಕರಾಗಿದ್ದ ಸುರೇಶ್ ಗೌಡರಿಂದ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಿತಿ ಮೀರಿತ್ತು. ಇದಕ್ಕೆ ಕಡಿವಾಣ ಹಾಕಿದ್ದೇನೆ ಎಂದು ಶಾಸಕ ಡಿ. ಸಿ. ಗೌರಿಶಂಕರ್ ಹೇಳಿದರು.
ಗೌರಿಶಂಕರ್ ಎಂಎಸ್ಐಎಲ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ತಾಲೂಕು ಹೊನ್ನುಡಿಕೆ ಗ್ರಾಮದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಸುರೇಶ್ ಗೌಡ ಚುನಾವಣೆಯಲ್ಲಿ ಸೋಲಿನ ಹತಾಶೆಯಿಂದ ನನ್ನ ಮೇಲೆ ಪುರಾವೆ ಇಲ್ಲದೆ ಆರೋಪಗಳನ್ನು ಮಾಡುತ್ತಿದ್ದಾರೆ. ಕ್ಷೇತ್ರದ ಕಾರ್ಯಕರ್ತರನ್ನು ಸುರೇಶ್ ಗೌಡ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಹೀಗಾಗಿ ಕ್ಷೇತ್ರದ ಮತದಾರರು ಅವರನ್ನು ಸೋಲಿಸಿದ್ದಾರೆ ಎಂದರು.