ತುಮಕೂರು: ಪಠ್ಯ ಪುಸ್ತಕದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಹೆಡ್ಗೆವಾರ್ ಹೇಳಿಕೆ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಂಗೆ ಪೂರ್ಣ ವಿಚಾರ ಗೊತ್ತಿಲ್ಲ, ಪಠ್ಯ ಪುಸ್ತಕದ ಸಮಿತಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ವಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಅನೇಕ ಶಿಕ್ಷಣ ತಜ್ಞರಿದ್ದರು. ಅವರು ಮಾಡಿರುವುದನ್ನು ನಮ್ಮ ಶಿಕ್ಷಣ ಇಲಾಖೆ ಪರಿಗಣಿಸಿದೆ. ಯಾವುದು ಇರಬೇಕು, ಯಾವುದು ಇರಬಾರದು ಎಂಬುದನ್ನ ಪರಿಶೀಲಿಸಲಾಗುವುದು ಎಂದರು.
ಈ ಎಲ್ಲಾ ಊಹಾಪೋಹಗಳಿಗೆ ಉತ್ತರ ಕೊಡುವಂತಹ ಪ್ರಯತ್ನ ಮಾಡಲ್ಲ. ಹಿಂದೆ ಇದೇ ತರಹದ ಊಹಾಪೋಹಗಳನ್ನು ನಾವು ನೋಡಿದ್ವಿ. ಟಿಪ್ಪು ಸುಲ್ತಾನ್ ಪಠ್ಯವನ್ನು ತೆಗೆದುಹಾಕಿದ್ದಾರೆ, ಹಾಗೆ ಮಾಡುತ್ತಿದ್ದಾರೆ, ಹೀಗೆ ಮಾಡುತ್ತಿದ್ದಾರೆ ಎಂಬೆಲ್ಲಾ ಮಾತುಗಳನ್ನು ಕೆಲವರು ಆಡುತ್ತಿದ್ದರು. ಅದೇ ಜನ ಇವತ್ತು ಇದನ್ನು ಹೇಳ್ತಿದ್ದಾರೆ. ಯಾವುದೇ ರೀತಿಯಲ್ಲಿಯೂ ಮಕ್ಕಳಿಗೆ ಹೇಳಬಾರದ ಒಂದೇ ಒಂದು ಲೈನ್ ಪಠ್ಯ ಪುಸ್ತಕದಲ್ಲಿ ಇಲ್ಲ ಅನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.