ತುಮಕೂರು: ನಾನು ಎರಡು ಕಡೆ ನಿಲ್ಲೋದೂ ಇಲ್ಲ. ನಮ್ಮ ಹೈಕಮಾಂಡ್ ಕೊರಟಗೆರೆಯಲ್ಲಿ ನನಗೆ ಟಿಕೆಟ್ ಘೋಷಿಸಿದೆ. ಕೊರಟಗೆರೆಯಲ್ಲಿ ಮಾತ್ರ ನಿಲ್ಲುತ್ತೇನೆ. ನಾನು ಎಲ್ಲೂ ಕೇಳಿಲ್ಲ. ಎರಡು ಕಡೆ ನಿಲ್ಲುವ ಅವಶ್ಯಕತೆ ನನಗಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಸ್ಪಷ್ಟಪಡಿಸಿದರು.
ಕೊರಟಗೆರೆಯಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ಸಂದರ್ಭದಲ್ಲೂ ಎಲ್ಲಿಯೂ ಎರಡು ಕಡೆ ಸ್ಪರ್ಧಿಸ್ತಿನಿ ಎಂದು ಹೇಳಿಲ್ಲ. ಕೊರಟಗೆರೆ ಕ್ಷೇತ್ರದ ಜನ ನನ್ನನ್ನು ಪ್ರೀತಿಯಿಂದ ಕಂಡಿದ್ದಾರೆ. ಎರಡು ಬಾರಿ ನನ್ನ ಗೆಲ್ಲಿಸಿದ್ದಾರೆ. ಹೀಗಾಗಿ ನಾನು ಯಾಕೆ ಕೊರಟಗೆರೆ ಜನರನ್ನು ಬಿಟ್ಟು ಬೇರೆ ಕಡೆ ಹೋಗಬೇಕು. ಕೊರಟಗೆರೆ ಕ್ಷೇತ್ರದ ಜನ ಈ ಚುನಾವಣೆಯಲ್ಲಿ ನನ್ನ ಪರ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಎರಡು ಕ್ಷೇತ್ರ ಸ್ಪರ್ಧೆ ವಿಚಾರ ಭಾರಿ ಚರ್ಚೆ: ಸಿದ್ದರಾಮಯ್ಯ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿರುವ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರ ನಡುವೆಯೂ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಅವರು ಸಹ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಬಳಿ ಪಟ್ಟು ಹಿಡಿದಿದ್ದರು.
ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಡಿಸಿಎಂ ಡಾ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದು, ನಾನು ಎರಡು ಕ್ಷೇತ್ರಗಳ ಟಿಕೆಟ್ ಕೇಳಿಲ್ಲ. ಕೊರಟಗೆರೆ ಕ್ಷೇತ್ರದಲ್ಲಿ ಮಾತ್ರ ನಾನು ಸ್ಪರ್ಧೆ ಮಾಡುತ್ತಿದ್ದೇನೆ. 2 ಕ್ಷೇತ್ರದ ಗೊಂದಲ ಯಾಕೆ ಬಂತೋ ಗೊತ್ತಿಲ್ಲ ಎನ್ನುತ್ತ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಶಫಿ ಅಹ್ಮದ್ ಕುಟುಂಬಕ್ಕೆ ಟಿಕೆಟ್ ತಪ್ಪಲು ಕಾರಣ ನಾನಲ್ಲ: ಮಾಜಿ ಶಾಸಕ ಶಫಿ ಅಹ್ಮದ್ ಕುಟುಂಬಕ್ಕೆ ಟಿಕೆಟ್ ತಪ್ಪಲು ಕಾರಣ ನಾನಲ್ಲ.ಶಫಿ ಅಹ್ಮದ್ ಅವರು ಶಾಸಕರಾಗಿ, ಜಿಲ್ಲಾ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಅವರು ನನ್ನನ್ನು ವಿಶ್ವಾಸಘಾತುಕರು ಎಂದಿದ್ದಾರೆ. ಅವರು ಹಿರಿಯರಾಗಿದ್ದರಿಂದ ಅವರು ಏನೇ ಹೇಳಿದ್ರು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದರು.
ಟಿಕೆಟ್ ಫೈನಲ್ ಮಾಡೋದು ನನ್ನೊಬ್ಬನ ನಿರ್ಧಾರ ಅಲ್ಲ. ಕಾಂಗ್ರೆಸ್ ರಾಷ್ಟ್ರೀಯ ಚುನಾವಣಾ ಸಮಿತಿ ಅದನ್ನು ನಿರ್ಧರಿಸುತ್ತದೆ. ಆ ಸಮಿತಿಯಲ್ಲಿ 16-17 ಜನರು ಇರುತ್ತಾರೆ. ಅವರೆಲ್ಲರೂ ಸೇರಿ ಮಾಡಿರುವ ತೀರ್ಮಾನ ಇದು. ನನ್ನ ಅಭಿಪ್ರಾಯ ಏನಿದೆ ಅದನ್ನು ನಾನು ಸಮಿತಿ ಮುಂದೆ ಹೇಳಿದ್ದೇನೆ. ಅವರು ಅದನ್ನು ಪರಿಶೀಲನೆ ಮಾಡಿ ಅವರ ನಿರ್ಧಾರ ಪ್ರಕಟಿಸಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಚುನಾವಣಾ ಸಮಿತಿಯ ತೀರ್ಮಾನ ಆಗಿದ್ದರಿಂದ ನಾವು ಇವತ್ತು ಪಕ್ಷದ ತೀರ್ಮಾನಗಳನ್ನು ಗೌರವಿಸುವುದು ಕರ್ತವ್ಯ. ನಾವು ಆ ಕೆಲಸ ಮಾಡ್ತಿವೆ. ಇಕ್ಬಾಲ್ ಅಹ್ಮದ್, ಶಫಿ ಅಹ್ಮದ್ ಅವರಿಗೆ ಭರವಸೆ ನಾನು ಕೊಡೋಕೆ ಆಗೋದಿಲ್ಲ. ನನಗೆ ಶಫಿ ಅಹ್ಮದ್ ಹಾಗೂ ನಮ್ಮ ನಡುವೆ ಏನೂ ಇಲ್ಲ ಎಂದು ಪ್ರತಿಕ್ರಿಯಿಸಿದರು.
ಇಕ್ಬಾಲ್ ಅಹ್ಮದ್ ಕೂಡ ಸಾಮಾನ್ಯ ಕಾರ್ಯಕರ್ತ ಹಾಗೂ ಅಲ್ಪಸಂಖ್ಯಾತರಾಗಿದ್ದು,ಅವರಿಗೆ ಯಾವ ಮಾನದಂಡ ಇಟ್ಟುಕೊಂಡು ಟಿಕೆಟ್ ಕೊಟ್ಟಿದ್ದಾರೆ ಗೊತ್ತಿಲ್ಲ. ಶಫಿ ಅಹ್ಮದ್ 50 ವರ್ಷ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅವರು ಪಕ್ಷ ತೊರೆಯದಂತೆ ನಾನು ಮನವಿ ಮಾಡುತ್ತೇನೆ ಎಂದರು.
ಇದನ್ನೂ ಓದಿ:ಅಭಿಮಾನಿಗಳ ಮುಂದೆ ಕಣ್ಣೀರು ಹಾಕಿದ ತಾಯಿ - ಮಗ: ಚುನಾವಣೆಗೆ ಸ್ಪರ್ಧಿಸಲು ಸೌರಭ್ ಚೋಪ್ರಾ ತೀರ್ಮಾನ