ತುಮಕೂರು :ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಕೆ ಎನ್ ರಾಜಣ್ಣ ಹೇಳಿದ್ದಾರೆ. ಅದಕ್ಕೆ ನಾನು ಆಭಾರಿ ಆಗಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ತಿಳಿಸಿದ್ದಾರೆ. ತುಮಕೂರಿನಲ್ಲಿ ಪೊಲೀಸ್ ಇಲಾಖೆ ವಸತಿಗೃಹಗಳ ಸಮುಚ್ಛಯ ಕಟ್ಟಡವನ್ನು ಉದ್ಘಾಟಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆ ಅದೃಷ್ಟ ಕೂಡಿ ಬರಲಿ ಅಂತ ನಾನು ಆಸೆ ಪಡ್ತೀನಿ. ಆ ಅದೃಷ್ಟ ಯಾವಾಗ ಕೂಡಿ ಬರುತ್ತೆ ಅಂತ ಹೇಳೋಕೆ ಆಗಲ್ಲ. ತುಮಕೂರಿನವರು ಅಲ್ವಾ ನೀವು. ನಮಗೆ ಒಳ್ಳೆದಾಗಬೇಕು ಅಂದ್ರೆ. ನನಗೆ ಸಪೊರ್ಟ್ ಮಾಡಿ ಎಂದು ಮಾಧ್ಯಮದವರಿಗೆ ಹೇಳಿದರು.
ಪರಮೇಶ್ವರ್ ಮನೆಯಲ್ಲಿ ಸಿಎಂ ಊಟದ ನೆಪದಲ್ಲಿ ಸಭೆ ನಡೆಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಮನೆಯಲ್ಲಿ ಯಾವುದೇ ತರಹದ ಚರ್ಚೆ ಆಗಿಲ್ಲ. ಬಹಳಷ್ಟು ಅರ್ಹರು ಇದ್ದಾರೆ. ಎಲ್ಲರೂ ಒಂದೊಂದು ಚಾನ್ಸ್ ತೆಗೆದುಕೊಳ್ಳಲಿ ಬಿಡಿ ಎಂದರು. ಪೊಲೀಸ್ ಇಲಾಖೆಯಲ್ಲಿ ಕನಿಷ್ಠ 70ರಷ್ಟು ಸಿಬ್ಬಂದಿಗೆ ವಸತಿ ಒದಗಿಸಲು ತೀರ್ಮಾನ ಮಾಡಿದ್ದೇವೆ. ಕಠಿಣ ಪರಿಸ್ಥಿತಿಯಲ್ಲಿ ಅವರು ಕೆಲಸ ಮಾಡುತ್ತಾರೆ. ಹೀಗಾಗಿ ಅವರ ಕುಟುಂಬಗಳು ಚೆನ್ನಾಗಿರಬೇಕು ಎಂಬ ಉದ್ದೇಶದಿಂದ ಈ ತೀರ್ಮಾನ ಮಾಡಿದ್ದೇವೆ ಎಂದರು.
ಹಣಕಾಸು ಸಚಿವರು ಆಗಿರುವ ಸಿಎಂ ಸಿದ್ದರಾಮಯ್ಯ ಇದಕ್ಕೆ ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದಾರೆ. ಹಾಗಾಗಿ ತುಮಕೂರಿನಲ್ಲಿ 72 ವಸತಿಗೃಹಗಳನ್ನ ಉದ್ಘಾಟನೆ ಮಾಡಿದ್ದೇವೆ. ಔರದ್ಕಾರ್ ವರದಿಯನ್ನ ಸಂಪೂರ್ಣವಾಗಿ ಅನುಷ್ಠಾನ ಮಾಡಿಲ್ಲ. ಮತ್ತೆ ಮರುಪರಿಶೀಲನೆ ಮಾಡಬೇಕು ಅಂತ ಯೋಚನೆ ಮಾಡಿದ್ದೇವೆ. ಇಲ್ಲಿಯವರೆಗೆ ಕೆಲವು ಅಂಶಗಳನ್ನ ಮಾತ್ರ ಪರಿಗಣನೆಗೆ ತೆಗೆದುಕೊಂಡಿದ್ದೇವೆ ಎಂದು ಹೇಳಿದರು. ಮುಖ್ಯವಾದ ಕೆಲ ಅಂಶಗಳನ್ನ ಪರಿಗಣನೆಗೆ ತೆಗೆದುಕೊಂಡಿಲ್ಲ. ಹಾಗಾಗಿ ಮತ್ತೆ ಪುನರ್ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.