ತುಮಕೂರು:ರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚುತ್ತಿವೆ.ವರದಕ್ಷಿಣೆ ಆಸೆಗೆ ಪತ್ನಿಯನ್ನು ಕೆರೆಗೆ ತಳ್ಳಿ ಪತಿಯೊಬ್ಬ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ನಡೆದಿದೆ. ದರ್ಶಿನಿ (26) ಮೃತ ದುರ್ದೈವಿಯಾಗಿದ್ದಾರೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ವರದಕ್ಷಿಣೆಗಾಗಿ ಕೊಲೆಗೈದ ಪತಿ:ಬೆಂಗಳೂರಿನ ಯಲಹಂಕ ಮೂಲದ ಹುಣಸೇಮಾರನಹಳ್ಳಿ ನಿವಾಸಿ ವಿನಯ್, ಕಳೆದ ಆರು ವರ್ಷಗಳ ಹಿಂದೆ ನಾಗಮಂಗಲ ಮೂಲದ ದರ್ಶಿನಿ ಎಂಬವರನ್ನು ಮದುವೆಯಾಗಿದ್ದ. ಈ ದಂಪತಿಗೆ 5 ವರ್ಷದ ಗಂಡು ಮಗುವಿದೆ. ಮದುವೆಯಾದಾಗಿನಿಂದಲೂ ಹಲವು ಬಾರಿ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ತಂದೆ ಮನೆಯಿಂದ ಹಣ ತರುವಂತೆ ದಿನನಿತ್ಯ ಪೀಡಿಸುತ್ತಿದ್ದ. ಒಂದು ತಿಂಗಳ ಹಿಂದೆಯಷ್ಟೇ ದಂಪತಿ ಬೆಂಗಳೂರು ನಗರ ಬಿಟ್ಟು ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಕಳೆದ ಶನಿವಾರ ಬಟ್ಟೆ ತೊಳೆಯಲೆಂದು ಕೆರೆ ಬಳಿ ತೆರಳಿದ್ದ ಪತ್ನಿ ದರ್ಶಿನಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ್ದ. ಬಳಿಕ ತನ್ನ ಪತ್ನಿ ನಾಪತ್ತೆಯಾಗಿದ್ದಾಳೆಂದು ಡ್ರಾಮ ಮಾಡಿದ್ದಲ್ಲದೇ, ತನ್ನ ಅತ್ತೆ, ಮಾವ ಸಂಬಂಧಿಕರಿಗೆ ಕರೆ ಮಾಡಿ ತುರುವೇಕರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತೆರಳಿದ್ದ. ಅಲ್ಲಿಂದ ತನ್ನ ಪತ್ನಿಯ ಫೋಟೋ ತರುವುದಾಗಿ ಠಾಣೆಯಿಂದ ಹೊರಬಂದವನು ನಾಪತ್ತೆಯಾಗಿದ್ದ. ಬಳಿಕ ಕೆರೆಯಲ್ಲಿ ದರ್ಶಿನಿ ಮೃತದೇಹ ಪತ್ತೆಯಾದ ಬಗ್ಗೆ ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದ್ದು, ಪರಿಶೀಲನೆ ನಡೆಸಿದ ಪೊಲೀಸರು ಶವ ದರ್ಶಿನಿಯದೆಂದು ಖಚಿತಪಡಿಸಿಕೊಂಡಿದ್ದಾರೆ. ಇದೀಗ ಕೊಲೆಗೈದು ನಾಪತ್ತೆಯಾಗಿದ್ದ ಆರೋಪಿ ವಿನಯ್ ಅನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವೆರೆಸಿದ್ದಾರೆ.