ತುಮಕೂರು:ಇಸ್ಲಾಂ ಸಮುದಾಯದವರು ಜಿಲ್ಲೆಯಲ್ಲಿ ಇಂದು ಬಕ್ರೀದ್ ಆಚರಿಸಿದರು. ಕೊರಟಗೆರೆ ಪಟ್ಟಣದಲ್ಲಿ ಇರುವ ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಸಾಮೂಹಿಕ ಪ್ರಾರ್ಥನೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭಾಗಿಯಾದರು. ಮುಸ್ಲಿಂ ಮುಖಂಡರೊಂದಿಗೆ ಪರಮೇಶ್ವರ್ ಪ್ರಾರ್ಥನೆ ಮಾಡಿದರು. ಕಪ್ಪು ಟೋಪಿ ಧರಿಸಿ ಪ್ರಾರ್ಥನೆಯಲ್ಲಿ ಭಾಗಿಯಾದ ಪರಮೇಶ್ವರ್, ಅವರೊಂದಿಗೆ ನೂರಾರು ಮುಸ್ಲಿಂ ಭಾಂದವರು ಹಾಜರಿದ್ದರು. ಈದ್ಗಾ ಮೈದಾನದಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಪ್ರಪ್ರಥಮವಾಗಿ ಅಲ್ಲಾಗೆ ನಾನು ನಮನ ಸಲ್ಲಿಸ್ತಿನಿ. ಇಡೀ ವಿಶ್ವಕ್ಕೆ ಸಂದೇಶ ಕೊಡುವ ಬಕ್ರೀದ್ ಹಬ್ಬ ಇದು. ನಾನು ಎಲ್ಲರಿಗೂ ನಮನಗಳನ್ನ ಹೇಳ್ತಿನಿ ಎಂದರು.
ಅಲ್ಲಾ ಎಲ್ಲರಿಗೂ ಅನೇಕ ರೀತಿ ಪರೀಕ್ಷೆ ಮಾಡ್ತಾನೆ. ಅದರಲ್ಲೂ ಮನುಷ್ಯರಿಗೆ ಹೆಚ್ಚು ಪರೀಕ್ಷೆ ಮಾಡ್ತಾನೆ. ಮಹಮ್ಮದ್ ಇಬ್ರಾಹಿಂ ಇಡೀ ವಿಶ್ವಕ್ಕೆ ಸಂದೇಶ ಕೊಟ್ಟಿದ್ದಾರೆ ಎಂದರು. ಇದು ಪವಿತ್ರವಾದ ಹಬ್ಬ. ನಾನು ಬಹಳ ಸಂತೋಷವಾಗಿ ನಿಮ್ಮೊಟ್ಟಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದೇನೆ. ಚುನಾವಣಾ ಸಂದರ್ಭದಲ್ಲಿ ನಿಮ್ಮ ಬಳಿ ಬಂದು ನಿಮ್ಮ ಅಶಿರ್ವಾದ ಕೇಳಿದ್ದೆ ಎಂದು ಇದೇ ವೇಳೆ ಹೇಳಿದರು.
ಅಲ್ಲಾನ ಕೃಪೆಯಿಂದ ಇವತ್ತು ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಿಮ್ಮ ಅಶಿರ್ವಾದದಿಂದ ಗೃಹ ಸಚಿವನಾಗಿದ್ದೇನೆ. ಈ ರಾಜ್ಯದಲ್ಲಿ ಶಾಂತಿ ಕಾಪಾಡಬೇಕಾದ ಕೆಲಸ ನನ್ನದು. ಇದರಲ್ಲಿ ಯಾವುದೇ ಮುಲಾಜಿಲ್ಲದೇ ನನ್ನ ಕೆಲಸವನ್ನ ನಿಬಾಯಿಸ್ತಿನಿ. ನಾನು ಶಾಂತಿ ಕಾಪಾಡ್ತಿನಿ ಅಂತ ಪ್ರಮಾಣ ವಚನ ಸ್ವೀಕಾರ ಮಾಡಿದಿನಿ. ಇಡೀ ರಾಜ್ಯದಲ್ಲಿ ಶಾಂತಿ ಕಾಪಾಡ್ತಿನಿ. ಎಲ್ಲ ಕಷ್ಟಗಳಿಗೂ ಅಲ್ಲಾ ಸಹಕಾರ ಮಾಡುತ್ತೇನೆ ಎಂದರು.
ಶಿವಮೊಗ್ಗದಲ್ಲಿ ಬಕ್ರೀದ್ ಆಚರಣೆ:ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಅತ್ಯಂತ ಶ್ರದ್ದಾ- ಭಕ್ತಿಯಿಂದ ಆಚರಿಸುತ್ತಾರೆ. ಬಕ್ರೀದ್ ಪ್ರಯುಕ್ತ ಶಿವಮೊಗ್ಗದ ಮುಸ್ಲಿಂ ಬಾಂಧವರು ತಿಲಕ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದರು.