ತುಮಕೂರು:ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ವಿವಿಧ ಸಂಘಟನೆಗಳಿಂದ ಕರೆ ನೀಡಲಾಗಿರುವ ಬೆಂಗಳೂರು ಬಂದ್ ಹಾಗೂ ಪ್ರತಿಭಟನೆಗಳು ಕಾನೂನು ಚೌಕಟ್ಟಿನಲ್ಲಿ ಇರಬೇಕು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಂದ್ ಮಾಡಲು ಅನುಮತಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅದು ಕಾನೂನಿಗೆ ವಿರೋಧವಾಗುತ್ತದೆ. ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ನಷ್ಟವಾಗಬಾರದು ಎಂದರು.
ಕಾನೂನಿಗೆ ವಿರುದ್ಧವಾದ ಚಟುವಟಿಕೆಗಳನ್ನು ಮಾಡಬಾರದು. ಶಾಂತಿಯುತವಾಗಿ ಪ್ರತಿಭಟನೆ ಮಾಡಿದರೆ ಅನುಮತಿ ಕೊಡಬಹುದು. ಸರ್ಕಾರದ ಜೊತೆಗೆ ಸಹಕಾರ ಮಾಡಿ, ನಾವು ಎಲ್ಲಾ ರೀತಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಇದನ್ನು ಪ್ರತಿಭಟನಾಕಾರರು ಮನನ ಮಾಡಿಕೊಳ್ಳಬೇಕು. ಸಿಡಬ್ಲ್ಯೂಎಂಎ ಮುಂದೆ ಎಲ್ಲವನ್ನು ಲೀಗಲ್ ಟೀಂ ಹೇಳುತ್ತಿದೆ. ನಾವು ಯಾವುದನ್ನು ಮುಚ್ಚಿಟ್ಟಿಲ್ಲ, ನೀರಾವರಿ ಸಚಿವರು, ಸಿಎಂ, ಕಾನೂನು ತಂಡ ಎಲ್ಲವನ್ನು ಮುಕ್ತವಾಗಿ ಹೇಳುತ್ತಿದ್ದಾರೆ. ಸರ್ವ ಪಕ್ಷ ಸಭೆ ಕರೆದು ವಿವರಣೆ ಪಡೆದಿದ್ದೇವೆ. ಸರ್ಕಾರಕ್ಕೆ ಜವಾಬ್ದಾರಿಯಿದೆ ಎಂದು ಸಚಿವ ಪರಮೇಶ್ವರ್ ಹೇಳಿದರು.
ಸುಮ್ಮನೆ ನೀರು ಬಿಡಲ್ಲ, 20 ಟಿಎಂಸಿ ನೀರು ಕೆಆರ್ಎಸ್ ಡ್ಯಾಂನಲ್ಲಿದೆ. 10 ಟಿಎಂಸಿ ಡೆಡ್ ಸ್ಟೋರೇಜ್ ಇರುತ್ತದೆ. 10 ಟಿಎಂಸಿ ನೀರನ್ನು ಬೆಂಗಳೂರಿಗೆ ಕುಡಿಯಲು ಕೊಟ್ಟು, ಅಲ್ಲಿ ಬೆಳೆಗೆ ನೀರು ಕೊಡುವುದು ಕಷ್ಟವಾಗಲಿದೆ ಎಂಬುದನ್ನು ವಿಚಾರ ಮಾಡಿದ್ದೇವೆ. ಸಿಡಬ್ಲ್ಯೂಎಂಎ ನವರು 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಅಂತ ಹೇಳಿದ್ದಾರೆ. ನಾವು ಅಪೀಲ್ ಹಾಕಿದ್ದೇವೆ, 26ಕ್ಕೆ ಕೇಸ್ ಬರುತ್ತದೆ, ಏನು ತೀರ್ಮಾನ ಆಗುತ್ತೆ ಅನ್ನೋದನ್ನು ಕಾದು ನೋಡೋಣ. ನಾವು ಅವರು ಹೇಳಿದಂತೆ 5 ಸಾವಿರ ಕ್ಯೂಸೆಕ್ ನೀರು ಬಿಟ್ಟಿಲ್ಲ. ಸಹಜವಾಗಿಯೇ ತಮಿಳುನಾಡಿನತ್ತ 2 ಸಾವಿರ ಕ್ಯೂಸೆಕ್ ಹರಿದು ಹೋಗುತ್ತದೆ. ಹೆಚ್ಚು ನೀರು ಬಿಟ್ಟಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.