ತುಮಕೂರು:ಈ ಬಾರಿ ಶಿರಾದ ಮದಲೂರು ಕೆರೆಗೆ ಹೇಮಾವತಿ ನದಿ ನೀರು ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ತುಮಕೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ಶಿರಾ ತಾಲೂಕಿಗೆ 0.9 ಟಿಎಂಸಿ ನೀರು ಹಂಚಿಕೆ ಆಗಿದೆ. ಈ ನೀರನ್ನು ಕಳ್ಳಂಬೆಳ್ಳ, ಶಿರಾ ಕೆರೆಗೆ ತುಂಬಿಸದೆ ಮದಲೂರಿಗೆ ಕೊಡಲಾಗುವುದಿಲ್ಲ ಎಂದು ಈ ಹಿಂದೆ ಹೇಳಿದ್ದೆ. ಆದರೆ ಸುದೈವ ಎಂಬಂತೆ ಈಗ ಕಳ್ಳಂಬೆಳ್ಳ, ಶಿರಾದ ಎರಡೂ ಕೆರೆಗಳು ತುಂಬಿವೆ. ಹೀಗಾಗಿ 0.9 ಟಿಎಂಸಿಯಲ್ಲಿ ಉಳಿದಿರುವ ನೀರನ್ನು ಮದಲೂರು ಕೆರೆಗೆ ಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲಾಗುವುದು: ಸಚಿವ ಮಾಧುಸ್ವಾಮಿ ನೀರು ಹರಿಯಲು ಶುರುವಾಗಿದ್ದು, 0.9 ಟಿಎಂಸಿಯಲ್ಲಿ ಶಿರಾ ಕೆರೆ ತುಂಬಿಸದೆ ಮದಲೂರು ಕೆರೆಗೆ ನೀರು ಹರಿಸಲಾಗುತ್ತಿರಲಿಲ್ಲ. ಶಿರಾ ಕೆರೆಯಿಂದ 34-35 ಹಳ್ಳಿಗಳಿಗೆ ನೀರು ನೀಡಬೇಕಾಗುತ್ತದೆ. ಉತ್ತಮ ಮಳೆಯಾಗುವ ಬಗ್ಗೆ ಯಾರಿಗೂ ಮುನ್ನವೇ ಗೊತ್ತಿರುವುದಿಲ್ಲ. ಆದ್ದರಿಂದ ಮದಲೂರು ಕೆರೆಗೆ ನೀರು ಕೊಡುವುದಕ್ಕಾಗಲ್ಲ ಅಂತ ಹೇಳಿದ್ದೆ ಎಂದು ತಿಳಿಸಿದರು.
ಶಿರಾ ಕಳ್ಳಂಬಳ್ಳ ನಡುವೆ ಎಲಿಯೂರು ಕುಡಿಯುವ ನೀರಿನ ಯೋಜನೆ ಇದೆ. ಮಳೆ ಬಾರದೆ ಇದ್ದರೆ ಆ ಭಾಗಗಳಿಗೆ ನೀರು ನೀಡುವುದಕ್ಕಾಗುವುದಿಲ್ಲ. ಆದರೆ ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ನೀರು ತುಂಬಿದೆ. ಹೀಗಾಗಿ ಈ ಕೆರೆಗಳಿಗೆ ಹರಿಸಿ ಉಳಿದಿರುವ ನೀರನ್ನು ಮದಲೂರಿಗೆ ನೀಡಲಾಗುತ್ತಿದೆ. 0.9 ಟಿಎಂಸಿಯನ್ನು ಎಷ್ಟು ದಿನ ಬಳಸಬಹುದೋ ಅಷ್ಟು ದಿನ ಕೊಡಲಾಗುವುದು ಎಂದರು.
ತುಮಕೂರು ಗ್ರಾಮಾಂತರಕ್ಕೆ ನೀರು ಬಿಡದೆ ಇರುವುದು ನನಗೆ ಗೊತ್ತಿಲ್ಲ. ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ, ಅವರು ನನ್ನ ಜೊತೆ ಮಾತಾಡಬಹುದಿತ್ತು.
ಶಿರಾ ಕೆರೆಗಳಿಗೆ ನೀರು ಕೊಡುತ್ತೇವೆ ಎಂದವರು ತುಮಕೂರು ಗ್ರಾಮಾಂತರಕ್ಕೆ ಕೊಡಲ್ವಾ? ಈ ಬಗ್ಗೆ ಪರಿಶೀಲನೆ ನಡೆಸಿ, ನೀರು ಹರಿಸುವತ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.