ತುಮಕೂರು:ಶಿರಾ ತಾಲೂಕಿಗೆ 0.89 ಟಿಎಂಸಿಎಫ್‌ಟಿಯಷ್ಟು ಹೇಮಾವತಿ ನದಿ ನೀರು ನಿಗದಿಯಾಗಿದ್ದು, ಇದರಲ್ಲಿ ಮದಲೂರು ಕೆರೆಗೆ 0.5 ಟಿಎಂಸಿಎಫ್‌ಟಿ ನೀರು ಹರಿಸಬಹುದಾಗಿದೆ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು.
ಇದನ್ನು ಎಸ್.ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ವೈ.ಕೆ. ರಾಮಯ್ಯ ಸಚಿವರಾಗಿದ್ದ ವೇಳೆಯಲ್ಲಿ ನಿಗದಿಪಡಿಸಲಾಗಿದೆ ಎಂದು ಸಂಸದರು ಹೇಳಿದರು. ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಾ ತಾಲೂಕಿಗೆ ನೀರು ಹರಿಸುವ ವಿಚಾರವಾಗಿ ವೈ.ಕೆ. ರಾಮಯ್ಯನವರು ತೀವ್ರವಾಗಿ ವಿರೋಧಿಸಿದ್ದನ್ನು ನಾನು ಒಪ್ಪಲಿಲ್ಲ, ಶಿರಾ ತಾಲೂಕು ಸಹ ಕರ್ನಾಟಕ ರಾಜ್ಯದಲ್ಲೇ ಇದೆ. ಅದೇನು ಪಾಕಿಸ್ತಾನದಲ್ಲಿಲ್ಲ, ಕುಡಿಯುವ ನೀರಿಗಾಗಿ ಹರಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದೆ ಎಂದು ತಿಳಿಸಿದರು.
ಸಂಸದ ಬಸವರಾಜ್ ಸುದ್ದಿಗೋಷ್ಠಿ ಈಗ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರಿಗೆ ತಪ್ಪು ಮಾಹಿತಿ ನೀಡಿರುವ ಸಾಧ್ಯತೆ ಇದೆ. ಶಿರಾ ತಾಲೂಕಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ನೀರು ಹರಿಸಲು ನಾಲೆ ಅಭಿವೃದ್ಧಿ ಕೆರೆಗಳ ಪುನಶ್ಚೇತನಕ್ಕೆ ಸರ್ಕಾರ ನೀಡಿದ್ದ ಹಣವನ್ನು ಟಿ.ಬಿ.ಜಯಚಂದ್ರ ಅವರು ನಾಲೆಯುದ್ದಕ್ಕೂ ಅಗತ್ಯವಿರುವ ಕಡೆ ಹೆಚ್ಚು ಚೆಕ್ ಡ್ಯಾಂಗಳನ್ನು ನಿರ್ಮಿಸಲು ಬಳಸಿಕೊಂಡಿದ್ದಾರೆ. ಈ ಭಾಗಕ್ಕೆ ನೀರು ಹರಿಸಿದರೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಬೇಕಾಗಬಹುದು. ಇದು ಜಯಚಂದ್ರ ಅವರ ದುರಾಸೆ ಎಂದು ಟೀಕಿಸಿದರು.
ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಯೋಜನೆ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಶ್ಚಿಮಾಭಿಮುಖವಾಗಿ ಹರಿದು ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ನೀರನ್ನು ಪೂರ್ವಕ್ಕೆ ತಿರುಗಿಸಿ, ಇದನ್ನು ನೀರಾವರಿ ಯೋಜನೆಗೆ ಬಳಸಿಕೊಳ್ಳಬಹುದಾಗಿದ್ದು, ನೇತ್ರಾವತಿ, ಕುಮಾರಧಾರ, ವರದಾ, ಕಾಳಿ, ಶರಾವತಿ, ಅಘನಾಶಿನಿ, ಬೇಡ್ತಿ ಇತ್ಯಾದಿ 60ಕ್ಕೂ ಹೆಚ್ಚು ನದಿಗಳಿಂದ 1,998 ಟಿಎಂಸಿ ನೀರನ್ನು ಅತ್ಯಂತ ಬರಗಾಲದಲ್ಲೂ ಹರಿಸಬಹುದಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಗ್ರಾಮಗಳ ಪ್ರತಿ ಮನೆ, ಮನೆಗೂ ಕುಡಿಯುವ ನೀರಿನಲ್ಲಿ ಸಂಪರ್ಕ ಮಾಡಲು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿಯೊಂದು ಗ್ರಾಮದ ‘ವಿಲೇಜ್ ಆಕ್ಷನ್ ಪ್ಲಾನ್’ ಮಾಡಲು ಜಿಲ್ಲೆಯ 330 ಗ್ರಾಮ ಪಂಚಾಯತಿಗಳಿಗೂ ಈಗಾಗಲೇ ಸೂಚನೆ ನೀಡಲಾಗಿದ್ದು, ಇದೇ ಮಾದರಿಯಲ್ಲಿ ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳಿಗೂ ಸೂಚಿಸಲಾಗಿದೆ ಎಂದು ಸಂಸದ ಜಿ.ಎಸ್. ಬಸವರಾಜು ಹೇಳಿದರು.
ಎಲ್ಲಾ 341 ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಗ್ರಾಮಗಳ ‘ವಾಟರ್‌ಆಡಿಟ್-ವಾಟರ್ ಬಡ್ಜೆಟ್- ವಾಟರ್ ಸ್ಟಾಟರ್ಜಿ’ ಮಾಹಿತಿ ಸಹಿತ ಮಾಡಿ ನಕ್ಷೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲು ಸೂಚಿಸಲಾಗಿದೆ. ನಾನು ಜಿಲ್ಲೆಯ ಹಲವಾರು ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಲು ನಿರ್ಧರಿಸಿದ್ದೇನೆ ಎಂದರು.
ಯಾವ ಸ್ಥಳೀಯ ಸಂಸ್ಥೆ ಜಿಐಎಸ್ ಆಧಾರಿತ ನಕ್ಷೆ ಅಥವಾ ಕೈಬರಹದ ನಕ್ಷೆಗಳನ್ನು ಪ್ರಕಟಿಸಿಲ್ಲವೋ ಅಂತಹ ಸ್ಥಳೀಯ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಉನ್ನತ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.