ತುಮಕೂರು: ವರುಣನ ರೌದ್ರಾವತಾರದಿಂದ ಒಂದೆಡೆ ಮನೆ ಹಾಗೂ ರಸ್ತೆ ಕುಸಿತವುಂಟಾಗಿದ್ದು, ಇನ್ನೊಂದೆಡೆ ಹಳ್ಳ ಕೊಳ್ಳಗಳಲ್ಲಿ ನೀರಿನ ರಭಸ ಹೆಚ್ಚಾಗಿದೆ.
ನಿನ್ನೆ ರಾತ್ರಿ ಸುರಿದ ಮಳೆಗೆ ಜಿಲ್ಲೆಯ ಗುಬ್ಬಿ ತಾಲೂಕಿನ ಕಬ್ಬಿಣ ಸೇತುವೆ ಪಾಳ್ಯ ಗ್ರಾಮದಲ್ಲಿ ಸುಶೀಲಮ್ಮ ಎಂಬವರ ಮನೆ ಗೋಡೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಿಕ್ಕನಾಯಕನಹಳ್ಳಿ ತಾಲೂಕಿನ ಬಹುತೇಕ ಎಲ್ಲಾ ಕೆರೆಗಳು ತುಂಬಿ ಕೋಡಿ ಒಡೆದಿವೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಗ್ರಾಮದ ಬೃಹತ್ ಕೆರೆಯ ಕೋಡಿ ಹಲವು ವರ್ಷಗಳ ಬಳಿಕ ತುಂಬಿದೆ. ಚಿಕ್ಕನಾಯಕನಹಳ್ಳಿಯ ಕೆರೆಕಟ್ಟೆಗಳ ನೀರು ನೆರೆಯ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯ ಸೇರುತ್ತಿದೆ.