ತುಮಕೂರು:ತುಮಕೂರು ನಗರದ ಸುತ್ತಮುತ್ತ ಗುಡುಗು ಮಿಂಚು ಗಾಳಿ ಸಹಿತ ಮಳೆಯಾದ ಹಿನ್ನೆಲೆಯಲ್ಲಿ ಕೆಲವೆಡೆ ರಸ್ತೆ ಬದಿಯಲ್ಲಿದ್ದ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಮತ್ತು ಜನ ಸಂಚಾರಕ್ಕೆ ಅಡಚಣೆಯಾಗಿತ್ತು.
ತುಮಕೂರು ನಗರದಲ್ಲಿ ಭಾರಿ ಮಳೆ... ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ಮರ
ತುಮಕೂರು ನಗರದಲ್ಲಿ ಶುಕ್ರವಾರ ಸಂಜೆ ಭಾರಿ ಮಳೆಯಾಗಿದ್ದು, ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಬೃಹತ್ ಮರವೊಂದು ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ಪರಿಣಾಮ ಆಟೋ ಸಂಪೂರ್ಣ ಜಖಂಗೊಂಡಿತ್ತು. ಅದೃಷ್ಟವಶಾತ್ ಆಟೋ ಚಾಲಕ ಪ್ರಣಾಪಾಯದಿಂದ ಪಾರಾಗಿದ್ದಾನೆ. ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ಬುಡಸಮೇತ ಬಿದ್ದಿದ್ದ ಮರವನ್ನು ತೆರವು ಗೊಳಿಸಲು ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಮರ ತೆರವುಗೊಳಿಸಲು ಅರ್ಧಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟರು. ಇದಲ್ಲದೆ ತುಮಕೂರು ನಗರದ ವಿದ್ಯಾನಗರ ಬಡಾವಣೆಯಲ್ಲಿ ಮರದ ಬೃಹತ್ ಕೊಂಬೆ ಮುರಿದು ಬಿದ್ದ ಪರಿಣಾಮ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ವಿದ್ಯುತ್ ತಂತಿ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ವಿದ್ಯಾ ನಗರ ಬಡಾವಣೆಯಲ್ಲಿ ಕೆಲ ಕಾಲ ವಿದ್ಯುತ್ ಸಂಪರ್ಕ ಬಹುತೇಕ ಸ್ಥಗಿತಗೊಂಡಿತ್ತು.
ಇನ್ನು ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಗುಂಡಿ ತೆಗೆದಿರೋ ಪರಿಣಾಮ ಮಳೆ ನೀರು ತುಂಬಿಕೊಂಡು ಅವಾಂತರ ಸೃಷ್ಟಿಸಿತ್ತು. ಗುಬ್ಬಿಗೇಟ್, ಟೌನ್ ಹಾಲ್. ಎಂ.ಜಿ.ರಸ್ತೆಗಳಲ್ಲಿ ಮಳೆನೀರು ಸಂಗ್ರಹವಾಗಿದ್ದರಿಂದ ಜನರು ಓಡಾಡಲು ಪರದಾಡುವಂತಾಗಿತ್ತು.