ಶಾಲಾ ವಿದ್ಯಾರ್ಥಿಗಳೊಂದಿಗೆ ಅಸಭ್ಯ ವರ್ತನೆ ಪ್ರಕರಣ ತುಮಕೂರು:ಶಾಲಾ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕನಿಗೆ ಗ್ರಾಮಸ್ಥರು ಹಲ್ಲೆ ನಡೆಸಲು ಮುಂದಾಗಿದ್ದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಶಾಲೆಯೊಂದರಲ್ಲಿ ಇತ್ತೀಚೆಗೆ ನಡೆದಿತ್ತು. ಶಿಕ್ಷಕನ ವರ್ತನೆಯ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು ಶಾಲೆ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಮಧುಗಿರಿ ಬಿಇಒ ತಿಮ್ಮರಾಜು ಅವರು ಶಿಕ್ಷಕ ಮಂಜುನಾಥ್ ಅವರನ್ನು ಅಮಾನತುಗೊಳಿಸಿದ್ದಾರೆ.
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಶಾಲೆಯ ಸಹ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು ಥಳಿಸಿದ್ದರು. ಪ್ರತಿನಿತ್ಯ ಮೈ ಮುಟ್ಟಿ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ವಿದ್ಯಾರ್ಥಿನಿಯರು ಪೋಷಕರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಳಗ್ಗೆ ಶಾಲೆ ಆರಂಭಕ್ಕೂ ಮುನ್ನವೇ ಶಿಕ್ಷಕರನ್ನು ತಡೆದು ಪೋಷಕರು ವಿಚಾರಿಸಿದ್ದಾರೆ. ಬಳಿಕ ಆತನಿಗೆ ಥಳಿಸಿ, ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿ ಆರೋಪಿ ಶಿಕ್ಷಕಕನ್ನು ಪೊಲೀಸರಿಗೆ ಒಪ್ಪಿಸಿದ್ದರು.
ಘಟನಾ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜು, ಬಡವನಹಳ್ಳಿ ಪೊಲೀಸ್ ಇನ್‌ಸ್ಪೆಕ್ಟರ್ ಹನುಮಂತರಾಯಪ್ಪ, ಸಿಡಿಪಿಒ ಅನಿತಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಈ ಬಗ್ಗೆ ದೂರು ದಾಖಲಾಗಿದೆ. ಸಹ ಶಿಕ್ಷಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜು, "ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ನಾನು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಹಲವಾರು ದಿನಗಳಿಂದ ಶಿಕ್ಷಕ ವಿದ್ಯಾರ್ಥಿನಿಯರ ಮೇಲೆ ಅದರಲ್ಲೂ 4 ಹಾಗೂ 5ನೇ ತರಗತಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರವಾಣಿ ಮೂಲಕ ತಿಳಿಸಿದ್ದರು. ಇಲ್ಲಿ ಬಂದಾಗ ಸುಮಾರು 300 ಜನ ಶಾಲೆ ಮುಂದೆ ಜಮಾಯಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಎಸ್ಡಿಎಂಸಿ ಅಧ್ಯಕ್ಷರು, ಊರಿನ ಪ್ರಮುಖರು ಹಾಗೂ ಎಲ್ಲಾ ಪೋಷಕರು ಸೇರಿ ಪ್ರತಿಭಟನೆಗೆ ಬಂದಿದ್ದರು."
"ಅವರೆಲ್ಲರಿಂದ ಮಾಹಿತಿ ತಿಳಿದು, ಲಿಖಿತವಾಗಿಯೂ ದೂರು ಪಡೆಯಲಾಯಿತು. ಪೊಲೀಸರು ಕೂಡ ಬಂದಿದ್ದರು. ಸಿಡಿಪಿಓ ಅಧಿಕಾರಿಗಳು ಕೂಡ ನಮ್ಮೊಂದಿಗೆ ಬಂದು ಮಕ್ಕಳಿಂದ ಹಾಗೂ ಪೋಷಕರಿಂದ ಹೇಳಿಕೆಗಳನ್ನು ಪಡೆದಿದ್ದಾರೆ. ಎಲ್ಲರ ಹೇಳಿಕೆಗಳನ್ನು ಪಡೆದ ನಂತರ ಶಿಕ್ಷಕ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ನಿಜವೆನಿಸಿದೆ. ಇನ್ನೂ ಆಳವಾಗಿ ತನಿಖೆ ನಡೆಸಿದ ನಂತರ ಪೂರ್ಣ ವಿವರ ಲಭ್ಯವಾಗಬಹುದು. ಈಗ ಮೇಲ್ನೋಟಕ್ಕೆ ದೌರ್ಜನ್ಯ ಎಸಗಿರುವುದು ಮನವರಿಕೆ ಆಗಿರುವುದರಿಂದ ಶಿಕ್ಷಕನನ್ನು ಪೊಲೀಸರಿಗೆ ಒಪ್ಪಿಸಿದ್ದೇನೆ. ಅವರ ಮೇಲೆ ಅಮಾನತು ಆದೇಶವನ್ನು ಹೊರಡಿಸಿದ್ದೇನೆ. ಜೊತೆಗೆ ಈ ಕುರಿತು ಸರಿಯಾಗಿ ಮಾಹಿತಿ ನೀಡದ ಆರೋಪದ ಮೇಲೆ ಮುಖ್ಯ ಶಿಕ್ಷಕನನ್ನು ಕೂಡ ಅಮಾನತುಗೊಳಿಸಿದ್ದೇನೆ " ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಚಿಕ್ಕೋಡಿಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ.. ಶಿಕ್ಷಕ ಅರೆಸ್ಟ್, ಸಹಕರಿಸಿದ ಟೀಚರ್ ವಿರುದ್ಧವೂ ದೂರು