ತುಮಕೂರು : ನಾನು ಎರಡನೇ ಅವಧಿಯಲ್ಲಿ ಸಿಎಂ ಆದಾಗ ಕಾಂಗ್ರೆಸ್ ನಾಯಕರ ಕಿರುಕುಳದ ನಡುವೆಯೂ ರೈತರ ಪರವಾಗಿ ಸಾಕಷ್ಟು ಕೆಲಸ ಮಾಡಿದೆ. ನನ್ನ ಆಡಳಿತದಲ್ಲಾದ ಅಭಿವೃದ್ಧಿ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಶಿರಾ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನನ್ನ ರಾಜಕಾರಣ ಮುಂದುವರೆಯಬೇಕೋ ಅಥವಾ ಬೇಡವೋ ಎಂಬುದನ್ನು ನೀವೇ ತೀರ್ಮಾನ ಮಾಡಬೇಕು. ಇಲ್ಲಿಂದ ನನ್ನ ಹೊಸ ರಾಜಕಾರಣ ಆರಂಭವಾಗಲಿದೆ. ಈ ಚುನಾವಣೆಯಲ್ಲಿ ನನಗೆ ವಿಷ ಕೊಡುತ್ತಿರೋ ಅಥವಾ ಹಾಲು ಕೊಡುತ್ತೀರೋ ಶಿರಾ ವಿಧಾನಸಭಾ ಕ್ಷೇತ್ರದ ಮತದಾರರಾದ ನೀವೇ ನಿರ್ಧರಿಸಬೇಕು ಎಂದು ಮಾರ್ಮಿಕವಾಗಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದೇನೆ. ಎರಡನೇ ಬಾರಿ ನಾನು ನಿರೀಕ್ಷೆಯಂತೆ ಉತ್ತಮ ಕೆಲಸ ಮಾಡಿದೆ. ಆದರೆ, ಜನ ಮೆಚ್ಚಿಕೊಳ್ಳಲಿಲ್ಲ. ಅದಕ್ಕೆ ನಾನು ಕಾಂಗ್ರೆಸ್ನವರ ಸಹವಾಸ ಮಾಡಿದ್ದೇ ಕಾರಣ ಇರಬಹುದು ಎಂದು ಮೈತ್ರಿ ಸರ್ಕಾರದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಪ್ಪಿಕೊಳ್ಳಲಿಲ್ಲ, ಪ್ರತಿದಿನ ನಾನು ಎಷ್ಟು ಹಿಂಸೆ ಅನುಭವಿಸಿದೆ ಎಂಬುದು ನನಗಷ್ಟೇ ಗೊತ್ತು, ಒಂದು ರೀತಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡಿದೆ ಎಂದು ಆಗಿನ ಕರಾಳ ದಿನವನ್ನು ಬಿಚ್ಚಿಟ್ಟರು.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಎರಡೂ ರಾಷ್ಟ್ರೀಯ ಪಕ್ಷಗಳು ಗೆದ್ದಿದ್ದೇವೆ ಎಂದು ಬೀಗುತ್ತಿವೆ. ಇದು ಜೆಡಿಎಸ್ ಭಧ್ರಕೋಟೆ ಅನ್ನೋದನ್ನು ಶಿರಾ ಕ್ಷೇತ್ರದ ಮತದಾರರು ಸಾಬೀತು ಮಾಡಿತೋರಿಸಬೇಕು ಎಂದು ಕಾರ್ಯಕರ್ತರಲ್ಲಿ ಹುರುಪು ತುಂಬಿದರು.
ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಎರಡು ದಿನದಲ್ಲಿ ಶಿರಾ ಕ್ಷೇತ್ರದ ಹೋಬಳಿ ಮಟ್ಟದ ಕಾರ್ಯಕರ್ತರನ್ನು ಕರೆದು ಶಿರಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದೇವೆ. ಈ ಚುನಾವಣೆಯನ್ನು ನಾವು ಗೆಲ್ಲಲೇಬೇಕು, ಇದೊಂದು ರೀತಿಯ ಅಗ್ನಿಪರೀಕ್ಷೆ, ಯಾರೂ ಕೂಡ ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇರಿಸಬಾರದು. ಒಂದೇ ತಾಯಿಯ ಮಕ್ಕಳಿದ್ದಂತೆ ಈ ಚುನಾವಣೆಯನ್ನು ನಡೆಸೋಣ, ಎಲ್ಲರ ತೀರ್ಮಾನದಂತೆ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ತಿಳಿಸಿದರು.
2018ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿರಲಿಲ್ಲ, ಆಗ ಬಿಜೆಪಿ ನನ್ನನ್ನು ಮುಖ್ಯಮಂತ್ರಿ ಮಾಡಲು ಮುಂದೆ ಬಂದಿತ್ತು, ಪ್ರಧಾನಿ ಮೋದಿಯೇ ಅವಕಾಶ ನೀಡಿದ್ದರು. ನಿಮ್ಮನ್ನೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಬೆಂಬಲಿಸುತ್ತೇವೆ, ಯಾರು ಕೂಡ ನಿಮ್ಮನ್ನು ಕೆಳಗಿಳಿಸುವುದಿಲ್ಲ ಎಂದಿದ್ದರು ಎಂದು ಬಿಜೆಪಿ ನಾಯಕರ ಜೊತೆಗಿನ ಮಾತುಕತೆಯನ್ನು ಇದೇ ವೇಳೆ ತಿಳಿಸಿದರು.