ತುಮಕೂರು:ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಲು ಕಾಂಗ್ರೆಸ್ ಜೊತೆ ಚಿತಾವಣೆ ಮಾಡಿದ್ದು, ಶಾಸಕ ಎಸ್ಆರ್ ಶ್ರೀನಿವಾಸ್, ಕಾಂಗ್ರೆಸ್ ನಾಯಕರ ಜೊತೆ ಏನೇನು ಮಾಡಿದ್ದಾರೆ ಎಂದು ನನಗೆ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗುಬ್ಬಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಶಾಸಕ ಶ್ರೀನಿವಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಎಸ್ಆರ್ ಶ್ರೀನಿವಾಸ್ ಪಕ್ಷದಲ್ಲಿ ಇರುತ್ತೇನೆ ಎಂದರೆ ಸಂತೋಷ. ಸಮಾವೇಶಕ್ಕೂ ಮುನ್ನ ಸಮಸ್ಯೆ ಬಗೆಹರಿಸಲು ಹೇಳಿದ್ದೆ ಅವರು ಬಂದಿಲ್ಲ. ಸೀಮಂತ ಕಾರ್ಯಕ್ರಮಕ್ಕೆ ಅವರನ್ನು ನಾನು ಆಹ್ವಾನ ನೀಡಿರಲಿಲ್ಲ. ಅವರು ಬಂದಿದ್ದರು. ಎರಡು ವರ್ಷದಿಂದ ಅವರು ನನ್ನ ಸಂಪರ್ಕದಲ್ಲಿ ಇಲ್ಲ. ಪಕ್ಷದ ಸಂಘಟನೆ ಕೆಲಸಕ್ಕೆ ಬಂದಿಲ್ಲ, ಶಿರಾ ಉಪಚುನಾವಣೆಗೆ ಬಂದಿಲ್ಲ ಎಂದರು.
ಪೈಪೂಟಿಗಾಗಿ ಕಾರ್ಯಕ್ರಮ ನಡೆಸಿಲ್ಲ:
ಸಿ.ಎಸ.ಪುರ ನಾಗರಾಜ ಹಾಗೂ ಅವರ ಬೆಂಬಲಿಗರು ನಮ್ಮ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷದ ಸಂಘಟನೆಯಿಂದ ಈ ಕಾರ್ಯಕ್ರಮ ಮಹತ್ವ ಪಡೆದಿದೆ. ಇದು ಯಾರದ್ದೋ ವಿರುದ್ಧ ಪೈಪೋಟಿ ನೀಡಲು ಕಾರ್ಯಕ್ರಮ ಮಾಡುತ್ತಿಲ್ಲ ಎಂದರು.
ಕಳೆದ ಮೂರು ವರ್ಷಗಳಿಂದ ಕೆಲ ನಾಯಕರು ನನ್ನ ಹಾಗೂ ಪಕ್ಷದ ವಿರುದ್ಧ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಅವರ ಪ್ರಕಾರ ನಮ್ಮ ಪಕ್ಷದ ಇಮೇಜ್ ಕಡಿಮೆಯಾಗಿದೆ. ಆದ್ದರಿಂದ ಅವರಿಗೆ ಉಪಯೋಗ ಆಗಲ್ಲ ಎಂಬಂತಹ ಮಾತುಗಳನ್ನು ಆಡಿದ್ದಾರೆ. ಗೊಂದಲ ಸೃಷ್ಟಿ ಮಾಡಿಕೊಂಡವರೇ ಗೊಂದಲ ಸರಿ ಮಾಡಿ ಎನ್ನುತ್ತಾರೆ. ನಮ್ಮಿಂದ ಯಾವುದೇ ಗೊಂದಲ ಆಗಿಲ್ಲ ಎಂದರು.
ಲಕ್ಷಾಂತರ ಕಾರ್ಯಕರ್ತರು ಕಟ್ಟಿರೋ ಪಕ್ಷ ಇದು. ಬಿಜೆಪಿಯ 'ಬಿ' ಟೀಂ ಆಗಿ ಜೆಡಿಎಸ್ ಕೆಲಸ ಮಾಡ್ತಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಮುಸ್ಲಿಂ ಭಾಂದವರಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ. 130 ಸ್ಥಾನ ಇದ್ದ ಕಾಂಗ್ರೆಸ್ ನಮ್ಮನ್ನು ಮುಗಿಸಲು ಬಂದು 78 ಸ್ಥಾನಕ್ಕೆ ಬಂತು. ಮುಸ್ಲಿಂ ಬಾಂಧವರೇನಾದ್ರೂ ನಮ್ಮ ಜೊತೆ ಇದ್ದಿದ್ದರೆ 70 ಸ್ಥಾನ ಗೆಲ್ಲುತ್ತಿದ್ದೆವು. ಈ ಜಿಲ್ಲೆಯಲ್ಲಿ ಏನೋ ಆಗೋಗಿದೆ. ಜೆಡಿಎಸ್ ಮುಗಿದೋಯ್ತು. ಅವರೇ ಆಚೆ ಕಳಿಸುತ್ತಿದ್ದಾರೆ ಎಂದೆಲ್ಲ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಗುಬ್ಬಿ ತಾಲೂಕಿನ ಎಲ್ಲ ಅಭಿವೃದ್ದಿ ಕೆಲಸ ಮಾಡಿಕೊಟ್ಟಿದ್ದೇವೆ. ಈ ಪಕ್ಷ ಮತದಾರರನ್ನು ನಂಬಿದೆ. ರೈತರಿಗೇನಾದರೂ ಒಳ್ಳೆದು ಮಾಡಿದ್ದೇವೆ ಅಂತಾ ನಿಮ್ಮ ಮನಸ್ಸಿನಲ್ಲಿದ್ದರೆ, ನಮ್ಮ ಪಕ್ಷವನ್ನು ಕೈಹಿಡಿದು ನಮಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ದೇವೇಗೌಡರ ಕುಟುಂಬ ಹಣ ಇಟ್ಟುಕೊಂಡು ರಾಜಕೀಯ ಮಾಡಲಿಲ್ಲ. ನಿಮ್ಮಂಥ ಲಕ್ಷಾಂತರ ಕಾರ್ಯಕರ್ತರಿಂದ ರಾಜಕೀಯ ಮಾಡಿ ನಾಡಿನ ಸೇವೆ ಮಾಡಿದ್ದೇವೆ. ನಿಮ್ಮ ಆಶೀರ್ವಾದದಿಂದ ಕೆಲಸ ಮಾಡುತ್ತಿದ್ದೇವೆ. ನಮಗೆ ದೊಡ್ಡ ದೊಡ್ಡ ಶ್ರೀಮಂತರ ಸಂಪರ್ಕವೂ ಇಲ್ಲ. ನಮಗೆ ಇರುವುದು ನಿಮ್ಮಂಥ ಕಾರ್ಯಕರ್ತರ ಸಂಬಂಧ ಮಾತ್ರ, ಒಂದೊಂದು ಚುನಾವಣೆ ನಡೆಸಬೇಕಾದರೂ ಎಷ್ಟೆಷ್ಟು ಕಷ್ಟಪಟ್ಟಿದ್ದೇವೆ ಎನ್ನುವುದು ನಮಗೆ ಮಾತ್ರ ಗೊತ್ತು. ನಾವೇನಿದ್ದರೂ ನಿಮ್ಮಿಂದ ಬೆಳೆದವರು ಎಂದು ಅವರು ಜನರನ್ನು ಉದ್ದೇಶಿಸಿ ಹೇಳಿದರು.
ಇಸ್ರೇಲ್‌ನಲ್ಲೇ ನನ್ನ ಪ್ರಾಣ ಹೋಗಬೇಕಿತ್ತು:
ಎರಡನೇ ಸಲ ಮುಖ್ಯಮಂತ್ರಿ ಆಗುವುದಕ್ಕೆ ಮೊದಲು ನಾನು ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್ʼಗೆ ಭೇಟಿ ನೀಡಿದ್ದೇ. ಅಲ್ಲಿಯೇ ನನ್ನ ಪ್ರಾಣ ಹೋಗಬೇಕಾಗಿತ್ತು. ನನ್ನ ತಂದೆ - ತಾಯಿ ಮಾಡಿದ ಪುಣ್ಯದಿಂದ ನಾನು ಬದುಕುಳಿದು ವಾಪಸ್ ಬಂದೆ.
ಎರಡನೇ ಸಲ ಹೃದಯದ ಆಪರೇಷನ್ ಆದಾಗ ಒಂದೇ ತಿಂಗಳಲ್ಲಿ ಪಕ್ಷ ಕಟ್ಟಬೇಕೆಂದು ರಾಜ್ಯಾದ್ಯಾಂತ ಪ್ರವಾಸಕ್ಕೆ ಹೊರಟುಬಿಟ್ಟೆ. ಯಾರು ಕೂಡ ನನ್ನ ಹಿಂದೆ ಬಂದು ರಾಜ್ಯಾದ್ಯಂತ ಸುತ್ತಲಿಲ್ಲ. ದೇವೇಗೌಡರು ಈ ವಯಸ್ಸಿನಲ್ಲೂ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಮತ್ತೊಮ್ಮೆ ಕುಮಾರಸ್ವಾಮಿ ಅವರು ಉಕ್ಕಿಬಂದ ದುಃಖವನ್ನು ತಡೆದುಕೊಂಡರು.
ದೇವೇಗೌಡರು ತುಮಕೂರಿನಲ್ಲಿ ಸೋತ ನಂತರ ಆರೋಗ್ಯ ಕೆಡಿಸಿಕೊಂಡಿದ್ದಾರೆ. ಆದರೂ ಪಕ್ಷ ಕಟ್ಟಲು ರಾಜ್ಯಾದ್ಯಂತ ಓಡಾಡುತ್ತಿದ್ದಾರೆ. ಗನ್ಮ್ಯಾನ್ಗಳ ಸಹಾಯದಿಂದ ಓಡಾಡುತ್ತಿದ್ದಾರೆ. ಮಾಜಿ ಪ್ರಧಾನಿಗಳು 60 ವರ್ಷ ಪರಿಶುದ್ಧ ರಾಜಕಾರಣ ಮಾಡಿದವರು. ಅಂತವರ ಬಗ್ಗೆ ಮಾತನಾಡಿದರೆ ಆ ಶಿವ ಏನ್ ಮಾಡಬೇಕೋ ದಾರಿ ತೋರಿಸ್ತಾನೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಗುಬ್ಬಿಯಲ್ಲಿ ಜೆಡಿಎಸ್ ಸಮಾವೇಶ: ಹೆಚ್ಡಿಕೆಗೆ 500 ಕೆಜಿ ಸೇಬಿನ ಹಾರ ಹಾಕಿದ ಕಾರ್ಯಕರ್ತರು