ತುಮಕೂರು : ರಾಜ್ಯ ಸರ್ಕಾರ ಖಾಸಗಿ ಅನುದಾನ ರಹಿತ ಶಾಲೆಗಳ ಮೇಲೆ ನಿರಂತರವಾಗಿ ಮಾಹಿತಿ ಪಡೆಯುವ ನೆಪದಲ್ಲಿ ಕಿರುಕುಳ ಕೊಡುತ್ತಿದೆ. ಜೊತೆಗೆ ಆರ್‌ಟಿಐ ಮೂಲಕ ಶಾಲೆಗಳಿಗೆ ಸೇರಬೇಕಾದ ಅನುದಾನ ಇನ್ನೂ ಪೂರ್ಣಪ್ರಮಾಣದಲ್ಲಿ ಸಂದಾಯವಾಗಿಲ್ಲ ಎಂದು ಖಾಸಗಿ ಅನುದಾನಿತ ಶಾಲೆಗಳ ಸಂಘದ ಜಿಲ್ಲಾಧ್ಯಕ್ಷ ಹಾಲನೂರು ಲೇಪಾಕ್ಷ ಆರೋಪಿಸಿದ್ರು.
ರಾಜ್ಯ ಸರ್ಕಾರ ಆರ್‌ಟಿಐ ಕಾಯಿದೆ ತಂದು ಬಹಳ ವರ್ಷಗಳಾಗಿವೆ. ಆದರೆ ಅದರ ಅನುದಾನದಲ್ಲಿ ಶಾಲೆಗಳಿಗೆ ಬರಬೇಕಿದ್ದ ಹಣ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಂದಾಯವಾಗಿಲ್ಲ. ಇನ್ನೂ 5.50 ಕೋಟಿ ರೂ ಬಾಕಿ ಇದ್ದು, ಕಳೆದ ಶೈಕ್ಷಣಿಕ ವರ್ಷದ ಎರಡನೇ ಕಂತಿನ ಹಣವನ್ನು ಇಲ್ಲಿಯವರೆಗೂ ನೀಡಿಲ್ಲ. ಜೂನ್ 29ರ ಒಳಗೆ ನೀಡದಿದ್ದರೆ, ಶಾಲೆಗಳನ್ನು ಬಹಿಷ್ಕರಿಸಿ, ಸರ್ಕಾರ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಅಸಮಾಧಾನ ಹೊರಹಾಕಿದ್ರು.
ಸರ್ಕಾರಿ ಖಾಸಗಿ ಅನುದಾನ ರಹಿತ ಶಾಲೆಗಳ ಮೇಲೆ ಅಧಿಕಾರಿಗಳ ಕಿರುಕುಳ ಆರೋಪ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಪಠ್ಯಪುಸ್ತಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಪಠ್ಯ ಪುಸ್ತಕಗಳ ಬಗ್ಗೆ ಅಧಿಕಾರಿಗಳು ಚಕಾರವೆತ್ತುತಿಲ್ಲ. ಪುಸ್ತಕಗಳ ಬಗ್ಗೆ ನಾವೇನಾದರೂ ಪ್ರಶ್ನಿಸಿದರೆ, ಬರುತ್ತದೆ, ಇನ್ನೂ ಬಂದಿಲ್ಲ...ಎಂದೆಲ್ಲಾ ಅಧಿಕಾರಿಗಳು ಸಬೂಬು ಹೇಳುತ್ತಾರೆ ಎಂದು ದೂರಿದರು.
ಶಾಲೆಯ ಗುಣಮಟ್ಟವನ್ನು ಪರೀಕ್ಷಿಸಲು ಬರುವಂತಹ ಅಧಿಕಾರಿಗಳು, 30 ವಿದ್ಯಾರ್ಥಿಗಳಿಗೆ ಒಂದು ಶೌಚಾಲಯ ಇದೆಯೇ? ಎಂದು ಪ್ರಶ್ನಿಸುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಇದೇ ರೀತಿ ಶೌಚಾಲಯದ ವ್ಯವಸ್ಥೆ ಇದೆಯಾ? ಎಂದು ನಾನು ಅಧಿಕಾರಿಗಳಿಗೆ ಕೇಳಲು ಬಯಸುವೆ ಎಂದರು.
ಇಷ್ಟೇ ಅಲ್ಲದೇ, ಒಂದು ಬಾರಿ ಅವರು ಕೇಳಿದಂತಹ ಎಲ್ಲಾ ದಾಖಲೆಗಳನ್ನು ನೀಡಿರುತ್ತೇವೆ. ಆದ್ರೆ ಅಧಿಕಾರಿಗಳು ಪದೇ ಪದೇ ಫೋನ್ ಕಾಲ್ ಮಾಡಿ ದಾಖಲೆಗಳನ್ನು ನೀಡುವಂತೆ ಒತ್ತಾಯಿಸುತ್ತಾರೆ. ಇಂತಹ ಕಿರುಕುಳ ತಡೆಯಲು ಆಗುತ್ತಿಲ್ಲ. ಇದು ಹೀಗೆಯೇ ಮುಂದುವರೆದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.