ತುಮಕೂರು: ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಲಿಂಗಾಯತ ಮತ್ತು ಒಕ್ಕಲಿಗರಿಗಾಗಿ ಪ್ರತ್ಯೇಕ ಪ್ರವರ್ಗ ರಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ನಿರ್ಧಾರ ಮಾಡಿರೋದು ನೋಡಿದ್ರೆ ರಂಗ ಎಂಬ ಪದವನ್ನು ತೆಗೆದು ಮಂಗ ಎಂದು ಮಾಡಿದಂತಾಗಿದೆ ಅಂತಾ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದರು.
ತುಮಕೂರು ತಾಲೂಕಿನ ಉರ್ಡಿಗೆರೆ ಗ್ರಾಮದಲ್ಲಿ ಮಾತನಾಡಿದ ಅವರು, ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಜನಾಂಗಕ್ಕೆ ಒಂದು ರೀತಿ ಮೂಗಿಗೆ ತುಪ್ಪ ಸವರುವ ಬದಲು ಹಣೆಗೆ ಸವರಿ ಅದರ ವಾಸನೆಯನ್ನು ಕೂಡ ಪಡೆದುಕೊಳ್ಳದಂತೆ ಸರ್ಕಾರ ಮಾಡಿದೆ. ಈ ರೀತಿ ಮೀಸಲಾತಿ ವರ್ಗೀಕರಣ ಮಾಡಲು ಸಾವಿರಾರೂ ಕೋಟಿ ರೂ. ಖರ್ಚು ಮಾಡಿ ಆಯೋಗವನ್ನು ರಚಿಸಿರುವುದು ದೊಡ್ಡ ಸಾಧನೆ ಎಂಬಂತೆ ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ. ಇಂತಹದಕ್ಕೆಲ್ಲಾ ಜನ ಮರುಳಾಗುವುದಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ: ಎರಡು ಪ್ರಬಲ ಸಮುದಾಯಗಳಾದ ಲಿಂಗಾಯತ ಹಾಗೂ ಒಕ್ಕಲಿಗರಿಗೆ ಪ್ರತ್ಯೇಕ ಪ್ರವರ್ಗ ರಚಿಸಿ ಮೀಸಲಾತಿ ನೀಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. 3ಬಿ ಪ್ರವರ್ಗದಲ್ಲಿದ್ದ ಲಿಂಗಾಯತರಿಗೆ 2ಡಿ ಪ್ರವರ್ಗ ಹಾಗೂ 3ಎ ಪ್ರವರ್ಗದಲ್ಲಿದ್ದ ಒಕ್ಕಲಿಗರಿಗಾಗಿ 2ಸಿ ಪ್ರತ್ಯೇಕ ಪ್ರವರ್ಗ ರಚಿಸಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಆದರೆ, ಇನ್ನೂ ಮೀಸಲಾತಿ ಪ್ರಮಾಣ ಘೋಷಿಸಿಲ್ಲ. ಮುಂದಿನ ದಿನಗಳಲ್ಲಿ ಮೀಸಲಾತಿ ಪ್ರಮಾಣ ಘೋಷಿಸಲು ತೀರ್ಮಾನಿಸಲಾಗಿದೆ. ಈ ಎರಡೂ ಸಮುದಾಯಗಳಿಗೆ EWSನ ಶೇ 10ರಷ್ಟು ಮೀಸಲಾತಿಯಿಂದ ಎಷ್ಟು ಉಳಿಯುತ್ತೋ ಅದನ್ನು 2D ಮತ್ತು 2Cಗೆ ಶಿಫ್ಟ್ ಮಾಡುವ ಚಿಂತನೆ ಇದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.