ತುಮಕೂರು: ನಗರದ ವಿವಿಧೆಡೆ ಗುರುಪೂರ್ಣಿಮೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಇನ್ನು ತ್ರಿವಿಧ ದಾಸೋಹದ ಪರಿಕಲ್ಪನೆಗೆ ಪೂರಕವಾಗಿರುವ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಪ್ರತಿಕೃತಿಯನ್ನು ತುಮಕೂರು ನಗರದಲ್ಲಿ ಭಕ್ತರು ಪ್ರತಿಷ್ಠಾಪಿಸುವ ಮೂಲಕ ಗುರುಪೌರ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಿದರು. ಸುಮಾರು ನಾಲ್ಕು ಅಡಿ ಎತ್ತರದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆಯ ಬಳಿ ಬಂದು, ಭಕ್ತರು ಮತ್ತು ಮಕ್ಕಳು ಕೈ ಮುಗಿದು ನಿಂತು ನಮನ ಸಲ್ಲಿಸುತ್ತಿದ್ದರು ಸಾಮಾನ್ಯವಾಗಿತ್ತು.
ತುಮಕೂರಿನಲ್ಲಿ ಗುರುಪೌರ್ಣಿಮೆಯನ್ನು ಶಿವಕುಮಾರ ಸ್ವಾಮೀಜಿ ಅವರ 4 ಅಡಿ ಪ್ರತಿಮೆ ಪ್ರತಿಷ್ಟಾಪಿಸುವುದರ ಮೂಲಕ ಆಚರಿಸಲಾಯಿತು. ಇದರಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕೂಡ ಭಕ್ತರು ಪ್ರೀತಿಯಿಂದ ಪ್ರತಿಷ್ಠಾಪಿಸಿದ್ದ ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆ ಬಳಿ ಕುಳಿತು ಅರ್ಧಗಂಟೆಗೂ ಹೆಚ್ಚು ಕಾಲ ಭಕ್ತರಿಗೆ ಆಶೀರ್ವಾದ ನೀಡಿದ್ದು ವಿಶೇಷವಾಗಿತ್ತು. ಇದೇ ವೇಳೆ ಭಕ್ತರು ಕೂಡ ಹಿರಿಯ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿಯವರಿಂದ ಏಕಕಾಲದಲ್ಲಿ ಆಶೀರ್ವಾದ ಪಡೆದ ಧನ್ಯತಾಭಾವ ವ್ಯಕ್ತಪಡಿಸಿದರು.
ಸಾಯಿಬಾಬಾ ಮಂದಿರ: ಅಮರಜ್ಯೋತಿ ನಗರದಲ್ಲಿರುವ ಶ್ರೀ ಸಾಯಿಬಾಬಾ ದೇವಾಲಯಕ್ಕೆ ಭಕ್ತಾದಿಗಳು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರಿಂದ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ದೇವಾಲಯಕ್ಕೆ ಪಾವಗಡದ ಜಪಾನಂದ ಸ್ವಾಮೀಜಿ, ಸಂಸದ ಜಿ.ಎಸ್ ಬಸವರಾಜು, ರಾಜೇಂದ್ರ ಮುಂತಾದವರು ದೇವರ ದರ್ಶನ ಪಡೆದು ಪುನೀತರಾದರು. ಇದೇ ವೇಳೆ, ಶ್ರೀ ಶಿರಡಿ ಸಾಯಿನಾಥ ಸೇವಾ ಸಮಿತಿಯ ಕಾರ್ಯದರ್ಶಿ ಗುರುಸಿದ್ದಪ್ಪ ಮಾತನಾಡಿ, ಬಾಬಾರವರು ಎಲ್ಲರಿಗೂ ಗುರುಗಳಾಗಿದ್ದರು. ಹಾಗಾಗಿ ಇಂದು ಎಲ್ಲಾ ಬಾಬಾ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ಅಲ್ಲದೇ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆಯುತ್ತಿದ್ದಾರೆ. ಇಂದು ಬೆಳಗ್ಗೆಯಿಂದ ರಾತ್ರಿಯವರೆಗೂ ಅನ್ನದಾಸೋಹ ನಡೆಸಲಾಗುತ್ತಿದೆ, ಸಾಯಿಬಾಬಾ ಭಕ್ತರೆಲ್ಲರನ್ನೂ ಒಳ್ಳೆಯ ಮಾರ್ಗದಲ್ಲಿ ಕೊಂಡೊಯ್ಯಲಿ ಎಂದು ದೇವರಲ್ಲಿ ಮೊರೆ ಇಟ್ಟರು.