ತುಮಕೂರು:ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನನ್ನ ಮನೆಗೆ ಮುತ್ತಿಗೆ ಹಾಕುತ್ತಾರಂತೆ. ತಾಕತ್ತು ಇದ್ದರೆ ಅವನೇ ಬಂದು ನನ್ನ ಮನೆಗೆ ಮುತ್ತಿಗೆ ಹಾಕಲಿ. ಗಂಡಸಾದರೆ ಅವನು ನನ್ನ ಎದುರು ಸ್ಪರ್ಧೆ ಮಾಡಲಿ ಎಂದು ಏಕವನಚನದಲ್ಲೇ ಹೆಚ್ಡಿಕೆಗೆ ಬಹಿರಂಗ ಸವಾಲು ಎಸೆದಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್.ಡಿ. ಕುಮಾರಸ್ವಾಮಿ ಊಸರವಳ್ಳಿ ಇದ್ದಹಾಗೆ, ಅವನೊಬ್ಬನೇ ಸತ್ಯಹರಿಶ್ಚಂದ್ರನಾ?. ತಾನೊಬ್ಬನೇ ಎಲ್ಲ ಎಂದು ತಿಳಿದುಕೊಂಡಿದ್ದಾನೆ. ಅವನಿಗಿಂತ ಬುದ್ಧಿವಂತರಿದ್ದಾರೆ. ಅವರ ಹಡಗು ಮುಳುಗುತ್ತಿದೆ. ಅದಕ್ಕೆ ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದಿಲ್ಲ ಅನ್ನೋದು ಗೊತ್ತಿತ್ತು. ಆದರೂ, ಅಭ್ಯರ್ಥಿ ಹಾಕಿದ್ದಾರೆ. ಅಲ್ಲದೇ, ಬೇರೊಬ್ಬ ಶಾಸಕರಿಗೆ ಸ್ವತಃ ಕುಮಾರಸ್ವಾಮಿಯೇ ಹಣ ಕೊಟ್ಟು ಅಡ್ಡಮತದಾನ ಮಾಡಿಸಿದ್ದು, ಇದೀಗ ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.