ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ತುಮಕೂರು: "ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಏನೂ ಹೇಳಲು ಆಗುವುದಿಲ್ಲ. ಪೊಲೀಸ್ ಮತ್ತು ಲೊಕಾಯುಕ್ತ ಅಧಿಕಾರಿಗಳು ಪಾರದರ್ಶಕವಾಗಿ ವಿಚಾರಣೆ ಮಾಡ್ತಿದ್ದಾರೆ. ವಿರೂಪಾಕ್ಷಪ್ಪ ಬಂಧನ ಯಾವಾಗ?, ಹೇಗೆ? ಮಾಡಬೇಕು ಎಂಬುದನ್ನು ಅವರೇ ನಿಶ್ಚಯಿಸುತ್ತಾರೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, "ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುತ್ತಾರೆ. ಮಾಡಾಳ್ ವಿರೂಪಾಕ್ಷಪ್ಪ ಅವರ ಆಸ್ತಿ, ಹಣ ಅಂತಸ್ತು ಎಲ್ಲವೂ ವಿಚಾರಣೆ ಹಂತದಲ್ಲಿದೆ. ಹೀಗಾಗಿ, ಸರ್ಕಾರ ಎಲ್ಲೂ ಕೂಡ ಹಸ್ತಕ್ಷೇಪ ಮಾಡಲು ಮುಂದಾಗುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
"ಅವರನ್ನು ಬಿಡಿ, ಇವರನ್ನು ಹಿಡಿ ಅಂತ ಕಾಂಗ್ರೆಸ್ ಸರ್ಕಾರದಲ್ಲಾದ ಹಾಗೆ ನಾವು ಮಾಡುವುದಿಲ್ಲ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಶಿಕ್ಷೆಯಿಂದ ತಪ್ಪಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಲೋಕಾಯುಕ್ತದ ಕತ್ತು ಹಿಸುಕಿದ್ರು. ಎಸಿಬಿಯನ್ನು ಜಾರಿಗೆ ತಂದ್ರು. ಬಳಿಕ ತಮಗೆ ಬೇಕಾದ ಅಧಿಕಾರಿಗಳನ್ನು ಹಾಕೊಂಡ್ರು. ಮುಂದೆ ಏನಾಯ್ತು ಅಂತಾ ನಿಮ್ಗೆ ಎಲ್ಲಾ ಗೊತ್ತಿದೆ. ಇಂದು ಎಸಿಬಿಯನ್ನು ರದ್ದು ಮಾಡಿ ಲೋಕಾಯುಕ್ತಕ್ಕೆ ಕೋರ್ಟ್ ಆದೇಶ ಮಾಡಿದೆ. ಲೋಕಾಯುಕ್ತಕ್ಕೆ ಎಲ್ಲಾ ರೀತಿಯಿಂದಲೂ ನಾವು ಸರ್ಪೊರ್ಟ್ ಮಾಡುತ್ತೇವೆ. ಅತ್ಯಂತ ಚಟುವಟಿಕೆಯಿಂದ ಲೋಕಾಯುಕ್ತ ಕೆಲಸ ಮಾಡುತ್ತಿದೆ" ಎಂದರು.
ಇದನ್ನೂ ಓದಿ:ಬಿಜೆಪಿ ಶಾಸಕನ ಪುತ್ರನ ಮನೆಯಲ್ಲಿ ಹಣ ಸಿಕ್ಕ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಆಗ್ಬೇಕು: ಡಾ ಜಿ ಪರಮೇಶ್ವರ್ ಆಗ್ರಹ
"ಕಾಂಗ್ರೆಸ್ ಸರ್ಕಾರದಲ್ಲೂ ಕೂಡ ಕೋಟಿಗಟ್ಟಲೆ ಹಣ ಸಿಕ್ಕಿತ್ತು. ತಿಂಗಳುಗಟ್ಟಲೆ ಜೈಲಿಗೆ ಹೋಗಿ ಬಂದವರಿದ್ದಾರೆ. ಅವರ ಬಳಿ ಈಗ ಇರುವ ಹಣ, ಆಸ್ತಿ ಅಕ್ರಮವಾಗಿದ್ದರೆ ಖಂಡಿತ ಅವರಿಗೆ ಶಿಕ್ಷೆ ಆಗುತ್ತದೆ. ಈ ವಿಚಾರದಲ್ಲಿ ನಾವು ಮೂಗು ತೂರಿಸೋಕೆ ಹೋಗುವುದಿಲ್ಲ. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ ನಾಯಕರಿಗಿಲ್ಲ. ಕೇಂದ್ರ ಮತ್ತು ರಾಜ್ಯದ ಅನೇಕ ನಾಯಕರು ಜಾಮೀನಿನ ಮೇಲೆಯೇ ಇದ್ದಾರೆ" ಎಂದು ವಾಗ್ದಾಳಿ ನಡೆಸಿದರು.
ಲೋಕಾಯುಕ್ತ ದಾಳಿ:ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ನಡೆಸಿದ್ದ ವೇಳೆ ಒಟ್ಟು 16.5 ಲಕ್ಷ ನಗದು, 2,800 ಗ್ರಾಂ ಚಿನ್ನ ಹಾಗೂ 20 ಕೆಜಿ ಬೆಳ್ಳಿ ಸಮೇತ ಅಪಾರ ಪ್ರಮಾಣದ ಆಸ್ತಿ ದಾಖಲೆ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ ಲಂಚ ಸ್ವೀಕರಿಸುತ್ತಿರುವಾಗ ಸಿಕ್ಕಿಬಿದ್ದ ಬೆನ್ನಲ್ಲೇ ಚನ್ನಗಿರಿಯಲ್ಲೂ ಲೋಕಾಯುಕ್ತರು ದಾಳಿ ನಡೆಸಿದ್ದರು.
ಇದನ್ನೂ ಓದಿ:ಲೋಕಾಯುಕ್ತ ದಾಳಿ ವಿಚಾರ... ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಲ್ಲ: ಆರಗ ಜ್ಞಾನೇಂದ್ರ
ಪ್ರಕರಣ ಸಂಬಂಧ ಪ್ರಶಾಂತ್ ಮಾಡಾಳ್ ಹಾಗೂ ಐವರನ್ನು ಬಂಧಿಸಲಾಗಿದೆ. ಬಂಧಿತ ಈ ಐವರನ್ನೂ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದರ ನಂತರ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ವಿರೂಪಾಕ್ಷಪ್ಪ ಮಾಡಾಳ್ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ರಾಜೀನಾಮೆ ಸಲ್ಲಿಸಿದ್ದಾರೆ.