ತುಮಕೂರು:ಖಾಸಗಿ ಆಸ್ಪತ್ರೆಗಳ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಕೋಟ್ಯಂತರ ರೂ.ಗಳನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕೋಟ್ಯಂತರ ರೂಪಾಯಿ ಬಾಕಿ ತುಮಕೂರಿನಲ್ಲಿ ಮಾತನಾಡಿದ ಅವರು, ಆಸ್ಪತ್ರೆಗಳಿಗೆ ಫಲಾನುಭವಿಗಳ ಹಣ ಬಿಡುಗಡೆ ಮಾಡದೆ ಸರ್ಕಾರ ಸತಾಯಿಸುತ್ತಿದೆ. ಸರ್ಕಾರದ ವಿಳಂಬ ಧೋರಣೆಯಿಂದಾಗಿ ಬಡವರಿಗೆ ಉಪಯೋಗ ಮಾಡಲು ಹೋಗಿ ಖಾಸಗಿ ಆಸ್ಪತ್ರೆಗಳು ಬಾಗಿಲು ಮುಚ್ಚುವ ಹಂತಕ್ಕೆ ತಲುಪಿವೆ ಎಂದರು.
ಕಳೆದ ಏಳು ತಿಂಗಳಿನಿಂದ ಯೋಜನೆಯ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಸರ್ಕಾರದಿಂದ 4.5 ಕೋಟಿ ರೂ. ಬಾಕಿ ಇದೆ. ಈ ಕೂಡಲೇ ಸರ್ಕಾರ ಖಾಸಗಿ ಆಸ್ಪತ್ರೆಗಳ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಅನೇಕ ಆರೋಗ್ಯ ಯೋಜನೆಯಡಿ ಬಡವರಿಗೆ ನೀಡಿರುವ ಚಿಕಿತ್ಸೆಗೆ ಪೂರಕವಾಗಿ ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿದೆ. ಅನೇಕ ಖಾಸಗಿ ಆಸ್ಪತ್ರೆ ಮಾಲೀಕರು ಹಣ ಬಿಡುಗಡೆ ಮಾಡಿಸುವಂತೆ ನನ್ನ ಬಳಿ ಅವಲತ್ತುಕೊಂಡಿದ್ದಾರೆ. ಆದ್ರೆ ಸರ್ಕಾರ ಮಾತ್ರ ಹಾರಿಕೆಯ ಉತ್ತರ ನೀಡುತ್ತಿದೆ. ತಕ್ಷಣ ಹಣ ಬಿಡಗಡೆ ಮಾಡಿ ಆರೋಗ್ಯ ಕ್ಷೇತ್ರವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.